27/08/2026
ಕೃಷ್ಣಾ ಉಪಕಾಲುವೆ-24ಕ್ಕೆ ನೀರು ಹರಿಸಲು ರೈತರ ಮನವಿ
ಇಂಡಿ: ತಾಲೂಕಿನ ಹಿರೇಬೇವನೂರ ಪ್ರದೇಶದ ಮೂಲಕ ಹಾದುಹೋಗುವ ಕೃಷ್ಣಾ ಉಪಕಾಲುವೆ-24 ಸುಮಾರು 17 ಕಿ.ಮೀ. ಉದ್ದವಿದ್ದು, ಪ್ರಸ್ತುತ ಕೇವಲ 5 ಕಿ.ಮೀ.ವರೆಗೆ ಮಾತ್ರ ನೀರು ಹರಿದು ನಿಂತುಹೋಗುತ್ತಿದೆ. ಇದರಿಂದ ಕಾಲುವೆಯ ಕೊನೆಯ ಭಾಗದಲ್ಲಿರುವ ಜಮೀನುಗಳಿಗೆ ನೀರಾವರಿ ಸೌಲಭ್ಯ ದೊರೆಯದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಒಂದೆಡೆ ಮಳೆಯ ಕೊರತೆ, ಮತ್ತೊಂದೆಡೆ ಆಲಮಟ್ಟಿ ಅಣೆಕಟ್ಟು ಭರ್ತಿಯಾಗಿದ್ದರೂ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ತಲುಪದಿರುವುದು ಕೃಷಿಕರ ಆತಂಕಕ್ಕೆ ಕಾರಣವಾಗಿದೆ. ತೀವ್ರ ಬರ ಪರಿಸ್ಥಿತಿಯಲ್ಲಿ ಉಪಕಾಲುವೆಗೆ ಸಮರ್ಪಕವಾಗಿ ನೀರು ಹರಿಸಿದರೆ ಹಳ್ಳ-ಕೊಳ್ಳಗಳು ತುಂಬಿ, ಜಾನುವಾರುಗಳಿಗೆ ನೀರು ಹಾಗೂ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸಹಕಾರಿಯಾಗಲಿದೆ ಎಂದು ರೈತರು ತಿಳಿಸಿದ್ದಾರೆ.
ಸಂಬಂಧಪಟ್ಟ ಇಲಾಖೆ ಹಾಗೂ ಸರ್ಕಾರ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಮಾನವೀಯ ದೃಷ್ಟಿಕೋನದಿಂದ ಕೂಡಲೇ ಕೃಷ್ಣಾ ಉಪಕಾಲುವೆ-24ಕ್ಕೆ ಸಮರ್ಪಕವಾಗಿ ನೀರು ಹರಿಸುವಂತೆ ರೈತರು ಆಗ್ರಹಿಸಿದರು.
ಈ ಕುರಿತು ಇಂಡಿ ರೈಲು ನಿಲ್ದಾಣದಲ್ಲಿರುವ ಕೃಷ್ಣಾ ಜಲನಿಗಮದ ಕಚೇರಿ ಎದುರು ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ ಅವರ ನೇತೃತ್ವದಲ್ಲಿ ಹಿರೇಬೇವನೂರ, ಇಂಗಳಗಿ, ಆಳೂರ ಸೇರಿದಂತೆ ವಿವಿಧ ಗ್ರಾಮಗಳ ರೈತರು ಪ್ರತಿಭಟನೆ ನಡೆಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಿಂಗನಗೌಡ ಪಾಟೀಲ, ಅನೀಲ ಜಾದವ್, ಸೋಮು ಕುಂಬಾರ, ರಾಜಶೇಖರ ಯರಗಲ್ಲ, ಗಡೇಪ್ಪ ಸೋಲಾಪೂರ, ಭೀಮ ಕುಂಬಾರ, ಸೈಪನ ಮುಜಾವರ, ಮೈಬೂಬಸಾಬ ಮುಜಾವರ, ಲಾಲಸಾಬ ಮಕಾನದಾರ, ಶೇಖರ ಕನ್ನೂರ, ಬಂದುಸಾಬ ನದಾಫ್,ಶಿವರಾಯ ಬಿರಾದಾರ,ಲಾಯಪ್ಪ ಮೇತ್ರಿ,ಮಹ್ಮದಸಾಬ ಮುಜಾವರಿ, ಇಸಾಕಸಾಬ ಮುಜಾವರ,ಅರವೀದ ಬಿರಾದಾರ, ಸಿದ್ದಪ್ಪ ಸೋಲಾಪುರ,ಸೇರಿದಂತೆ ಹಲವರು ಉಪಸ್ಥಿತರಿದ್ದರು.