05/09/2026
ಪೌರ ಕಾರ್ಮಿಕರಿಗೆ ನಿವೇಶನ ಹಂಚಿಕೆಯಲ್ಲಿ ವಿಳಂಬ: ಸತ್ಯಪ್ರಕಾಶ್ ನೇತೃತ್ವದಲ್ಲಿ ಎಚ್ಚರಿಕೆ.
ಶಿರಾ: ಶಿರಾ ನಗರದ ಪೌರ ಕಾರ್ಮಿಕರಿಗೆ ನಿವೇಶನ ಹಂಚಿಕೆ ಮಾಡುವಲ್ಲಿ ವಿಳಂಬವಾಗುತ್ತಿರುವುದಕ್ಕೆ ಜೆಡಿಎಸ್ ತಾಲ್ಲೂಕು ಅಧ್ಯಕ್ಷರಾದ ಸತ್ಯಪ್ರಕಾಶ್ ಮತ್ತು ತುಮುಲ್ ನಿರ್ದೇಶಕರಾದ ಎಸ್. ಅರ್ ಗೌಡ್ರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೌರ ಕಾರ್ಮಿಕರಿಗೆ ನಿವೇಶನ ಹಂಚಿಕೆ ಪ್ರಕ್ರಿಯೆಯನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡದೆ, ಆದಷ್ಟು ಬೇಗ ನಿವೇಶನಗಳನ್ನು ಹಂಚಿಕೆ ಮಾಡಬೇಕು ಎಂದು ಅವರು ನಗರಸಭೆ ಪೌರಾಯುಕ್ತರು ಹಾಗೂ ನಗರಸಭೆ ಅಧ್ಯಕ್ಷರಿಗೆ ಆಗ್ರಹಿಸಿದರು.
ಪೌರ ಕಾರ್ಮಿಕರು ನಗರದ ಸ್ವಚ್ಛತೆ ಹಾಗೂ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಅವರ ಬಹುದಿನಗಳ ನಿವೇಶನದ ಬೇಡಿಕೆಯನ್ನು ನಗರಸಭೆ ಆಡಳಿತ ಗಂಭೀರವಾಗಿ ಪರಿಗಣಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಂಡು ಅರ್ಹ ಪೌರ ಕಾರ್ಮಿಕರಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಸತ್ಯಪ್ರಕಾಶ್ ಒತ್ತಾಯಿಸಿದರು.
ನಿವೇಶನ ಹಂಚಿಕೆ ವಿಚಾರದಲ್ಲಿ ಇನ್ನಷ್ಟು ವಿಳಂಬವಾದರೆ, ಪೌರ ಕಾರ್ಮಿಕರ ಪರವಾಗಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಪೌರಾಯುಕ್ತರು ಹಾಗೂ ನಗರಸಭೆ ಅಧ್ಯಕ್ಷರಿಗೆ ಸತ್ಯಪ್ರಕಾಶ್ ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಕಿಟ್ಟಪ್ಪ,ರಾಘಣ್ಣ, ರಾಮಣ್ಣ, ಮುದಿಮಡುರಂಗಶಾಮಣ್ಣ, ಶ್ರೀರಂಗ, ಹೇಮಂತ್ ಕುಮಾರ್, ರಹಮತ್,ನಾಗಬೂಷಣ್,ಸಾದಿಕ್ ಯಶಸ್ವಿನಿ, ಲಲಿತಮ್ಮ, ತಿಮ್ಮರಾಜು, ಕೋಟೆ ಮಹದೇವ್ ಇನ್ನು ಹಲವರು ಹಾಜರಿದ್ದರು