01/06/2026
ದೇವೇಗೌಡರ ಪ್ರಧಾನ ಪರ್ವ
-------------------------
ಕನ್ನಡದ ಮಣ್ಣಿನ ಮಗ ಪ್ರಧಾನಿ ಪಟ್ಟ
ಅಲಂಕರಿಸಿ ಇಂದಿಗೆ 30 ವರ್ಷ
-------------------------
- ವಿಶ್ವೇಶ್ವರ ಭಟ್ I ವಿಶ್ವವಾಣಿ
ಇಂದಿಗೆ ಕಾಲು ಶತಮಾನ. ಹರದನಹಳ್ಳಿ ದೊಡ್ಡೇಗೌಡ ದೇವೇಗೌಡರು ಭಾರತದ ಹನ್ನೊಂದನೇ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ, ರಾಷ್ಟ್ರ ರಾಜಕಾರಣದಲ್ಲಿ ಕಂಪನವುಂಟಾಗಿದ್ದು ನಿಜ. ದೇವೇಗೌಡರಂಥ ಒಬ್ಬ ಸಾಮಾನ್ಯ ರೈತನ ಮಗ, ಕರ್ನಾಟಕಕ್ಕಷ್ಟೇ ಸೀಮಿತವಾಗಿದ್ದ ನಾಯಕನೊಬ್ಬ, ಜವಾಹರಲಾಲ್ ನೆಹರು, ಲಾಲ್ ಬಹಾದ್ದೂರ ಶಾಸ್ತ್ರಿ, ಇಂದಿರಾಗಾಂಧಿ ಕುಳಿತ ಕುರ್ಚಿಯನ್ನು ಅಲಂಕರಿಸಬಹುದು ಎಂದು ಯಾರೂ ಕನಸು-ಮನಸಿನಲ್ಲಿಯೂ ಊಹಿಸಿರಲಿಲ್ಲ. ಸ್ವತಃ ದೇವೇಗೌಡರೂ, ಇದನ್ನು ಎಣಿಸಿರಲಿಕ್ಕಿಲ್ಲ. ಆದರೆ ರಾಷ್ಟ್ರ ರಾಜಕಾರಣದಲ್ಲಾದ ಬಹಳಷ್ಟು ಬದಲಾವಣೆ, ಸ್ಥಿತ್ಯಂತರಗಳಿಂದ ಅಚಾನಕ್ ಆಗಿ ದೇವೇಗೌಡರು ಪ್ರಧಾನಿಯಾಗುವಂಥ ಸಂದರ್ಭ-ಸನ್ನಿವೇಶಗಳು ಒದಗಿ ಬಂದವು.
ಅದಕ್ಕೆ ದೇವೇಗೌಡರು ಅರ್ಹ ನಾಯಕರಾಗಿದ್ದರಾ, ಇಲ್ಲವಾ, ಅರ್ಹತೆ ಇಲ್ಲದಿದ್ದರೆ ಅಂಥ ಮಹತ್ವದ ಹುದ್ದೆ ಅವರಿಗೆ ಹೇಗೆ ಒಲಿದು ಬರುತ್ತಿತ್ತು ಎಂಬುದು ಇಂದಿಗೂ ಚರ್ಚೆ, ಚಲಾವಣೆಯಲ್ಲಿರುವ ಪ್ರಶ್ನೆ. ಅಂಥ ಸಂವಾದಗಳೇ ಪ್ರಜಾಪ್ರಭುತ್ವದ ಕ್ರಿಯಾಶೀಲತೆಯ ಮೂಲದ್ರವ್ಯ. ಇರಲಿ. ಆದರೆ ಒಬ್ಬ ಸಾಮಾನ್ಯ ರೈತಾಪಿ ಕುಟುಂಬದಲ್ಲಿ ಹುಟ್ಟಿದ, ತಕ್ಕಮಟ್ಟಿನ ವಿದ್ಯಾಭ್ಯಾಸ ಮುಗಿಸಿದ್ದ, ರಾಜ್ಯದ ಹೊರಗೆ ರಾಜಕಾರಣ ಮಾಡಿಲ್ಲದ, ಅಂಥ ಮಹತ್ವಾಕಾಂಕ್ಷೆಯೂ ಇಲ್ಲದ, ಹಿಂದಿ ಭಾಷೆಯ ಗಂಧ-ಗಾಳಿಯೂ ಗೊತ್ತಿಲ್ಲದ ಒಬ್ಬ ರಾಜಕಾರಣಿ, ಏಕಾಏಕಿ ಭಾರತದಂಥ, ಜಗತ್ತಿನಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಿಯಾಗುವುದು ಸಣ್ಣ ಮಾತೇನಲ್ಲ.
ಇದು ಪ್ರಜಾಪ್ರಭುತ್ವದ ಮಹಿಮೆ, ಗುಣಲಕ್ಷಣ ಮತ್ತು ಅದರ ಅಂತಃಸತ್ವದ ವೈಭವೋಪೇತ ಅನಾವರಣ. ಅದಕ್ಕಿಂತ ಮುಖ್ಯವಾಗಿ, ಕರ್ನಾಟಕದವರೊಬ್ಬರು ಈ ದೇಶದ ಪ್ರಧಾನಿಯಾಗಿದ್ದು ಕನ್ನಡಿಗರೆಲ್ಲರ ಅಭಿಮಾನ, ಹೆಮ್ಮೆಯ ಸಂಗತಿ. ಅದು ದೇವೇಗೌಡರ ಸಮಗ್ರ ಜೀವನದ ಸಾರ್ಥಕ ಕ್ಷಣವೂ ಹೌದು!
ಹನ್ನೊಂದನೇ ಲೋಕಸಭೆ ಚುನಾವಣೆ ಫಲಿತಾಂಶ ಬಹಿರಂಗವಾದಾಗ, ಯಾವ ಪಕ್ಷಕ್ಕೂ ಬಹುಮತ ಬಂದಿರಲಿಲ್ಲ. ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ 161 (+41) ಸ್ಥಾನಗಳನ್ನು ಗಳಿಸಿತ್ತು. ಕಾಂಗ್ರೆಸ್ 140 (-104) ಮತ್ತು ಕಮ್ಯುನಿಸ್ಟ್ ಪಕ್ಷ 44 (-5) ಸ್ಥಾನಗಳನ್ನು ಗಳಿಸಿದ್ದವು. ಡಿಎಂಕೆ, ತೆಲುಗು ದೇಶಂ, ತಮಿಳು ಮಾನಿಲಾ ಕಾಂಗ್ರೆಸ್, ಅಸ್ಸಾಂ ಗಣ ಪರಿಷತ್ ಮುಂತಾದ ಪ್ರಾದೇಶಿಕ ಪಕ್ಷಗಳು ನೂರಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಿದ್ದವು. ಅತಿ ಹೆಚ್ಚು ಸ್ಥಾನ ಗಳಿಸಿದ ಏಕೈಕ ಪಕ್ಷವೆಂದು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್.ಡಿ.ಎ.ಯನ್ನು ಸರಕಾರ ರಚನೆಗೆ ಆಹ್ವಾನಿಸಲಾಯಿತು. ಆದರೆ ಅವರಿಗೆ ಬಹುಮತ ಸಾಬೀತುಪಡಿಸಲು ಸಾಧ್ಯವಾಗಲಿಲ್ಲ. ಹದಿಮೂರು ದಿನಗಳ ಕಾಲ ಅಧಿಕಾರದಲ್ಲಿದ್ದ ವಾಜಪೇಯಿ ಸರಕಾರ ಬಿದ್ದು ಹೋಯಿತು.
ಆ ಸಂದರ್ಭದಲ್ಲಿ ದೇಶದ ರಾಜಕಾರಣದಲ್ಲಿ ಸಾಕಷ್ಟು ಅನಿಶ್ಚಿತತೆಗಳಿದ್ದವು. ಆಗ ಪ್ರತಿಪಕ್ಷಗಳೆಲ್ಲಾ ಒಂದಾಗಿ ಸಂಯುಕ್ತರಂಗವನ್ನು (192 ಸದಸ್ಯರು) ರಚಿಸಿಕೊಂಡವು. ಹೀಗೆ ರಚಿಸಿಕೊಂಡ ಸಂಯುಕ್ತ ರಂಗ ಮತ್ತು ಕಾಂಗ್ರೆಸ್ ಸೇರಿ ಸರಕಾರ ರಚಿಸುವುದೆಂದು ತೀರ್ಮಾನವಾಯಿತು. ಸರಕಾರವನ್ನು ಸೇರದೇ, ಬಾಹ್ಯ ಬೆಂಬಲ ನೀಡಲು ಕಾಂಗ್ರೆಸ್ಸಿಗರು ಮತ್ತು ಕಮ್ಯುನಿಸ್ಟರು ನಿರ್ಧರಿಸಿದರು. ಸಂಯುಕ್ತ ರಂಗದ ಅಭ್ಯರ್ಥಿ ಪ್ರಧಾನಿಯಾಗುವುದೆಂದು ತೀರ್ಮಾನವಾಯಿತು.
ಆಗ ದೇವೇಗೌಡರು, ಕರ್ನಾಟಕದ ಮುಖ್ಯಮಂತ್ರಿಯಾಗಿ ಒಂದೂವರೆ ವರ್ಷವನ್ನಷ್ಟೇ ಪೂರೈಸಿದ್ದರು. ಹನ್ನೊಂದನೇ ಲೋಕಸಭೆಗೆ ಜನತಾ ದಳದಿಂದ ಕೇವಲ ಹದಿನಾರು (ಕರ್ನಾಟಕದಿಂದ ಹದಿನೈದು ಮತ್ತು ಕೇರಳದಿಂದ ಒಬ್ಬರು) ಸದಸ್ಯರು ಆಯ್ಕೆಯಾಗಿದ್ದರು. ಪ್ರಧಾನಿ ಹುದ್ದೆಗೆ ಇದಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದ ಪಕ್ಷಗಳ ನಾಯಕರಾದ ಲಾಲೂ ಪ್ರಸಾದ ಯಾದವ್, ಮುಲಾಯಂ ಸಿಂಗ್ ಯಾದವ್, ಶರದ ಯಾದವ್, ಐ.ಕೆ.ಗುಜ್ರಾಲ್, ಕಮ್ಯುನಿಸ್ಟ್ ಪಕ್ಷದ ಜ್ಯೋತಿ ಬಸು ಇವೇ ಮುಂತಾದವರ ಹೆಸರುಗಳು ಕೇಳಿ ಬಂದಿದ್ದವು. ಮಾಜಿ ಪ್ರಧಾನಿ ವಿ.ಪಿ.ಸಿಂಗ್, ಜಿ.ಕೆ.ಮೂಪನಾರ ಅವರ ಹೆಸರುಗಳೂ ಚರ್ಚಿತವಾದವು. ಆಗ ದೇವೇಗೌಡರು ಈ ಪ್ರಧಾನಿ ಹುದ್ದೆಯ ರೇಸಿನಲ್ಲಿಯೇ ಇರಲಿಲ್ಲ. ಆದರೆ ಅದೇನಾಯಿತೋ ಏನೋ? ಈ ಎಲ್ಲಾ ಪಕ್ಷಗಳ ನಾಯಕರ ಸಭೆಯಲ್ಲಿ ಒಬ್ಬರ ಹೆಸರು ಮತ್ತೊಬ್ಬರಿಗೆ ಸಹ್ಯವಾಗಲಿಲ್ಲ. ತಾನು ಆಗದಿದ್ದರೂ ಪರವಾಗಿಲ್ಲ, ಇವರು ಆಗಬಾರದೆಂದು ಅವರೆಲ್ಲ ಹೊಂಚು ಹಾಕಿದರು.
ಆಗ ಪ್ರಸ್ತಾಪವಾಗಿದ್ದು ದೇವೇಗೌಡರ ಹೆಸರು! ದೇವೇಗೌಡರು unique art of coming last but finishing first ಅಂತಾರಲ್ಲ, ಆ ರೀತಿ ಎಲ್ಲರಿಗೂ ವಿಸ್ಮಯ ಮೂಡಿಸುವ ರೀತಿಯಲ್ಲಿ ಪ್ರಧಾನಿ ಹುದ್ದೆಗೆ ಸರ್ವಸಮ್ಮತ ಅಭ್ಯರ್ಥಿಯಾಗಿ ಆಯ್ಕೆಯಾದರು. ಬೆಂಗಳೂರಿನಿಂದ ದಿಲ್ಲಿಗೆ ದೇವೇಗೌಡರು ಕರ್ನಾಟಕದ ಮುಖ್ಯಮಂತ್ರಿಯಾಗಿ ಹೋಗಿದ್ದರು. ವಾಪಸ್ ಬರುವಾಗ ಅವರು ಭಾರತದ ಪ್ರಧಾನಿ!
ದೇವೇಗೌಡರೇ ಅನೇಕ ಸಲ ಹೇಳಿರುವಂತೆ ಅದು ದೈವ ನಿಯಾಮಕ, ವಿಧಿ ಲಿಖಿತ ಮತ್ತು ಅವರ ಹಣೆಬರಹ. ದೈವವೇ ಆ ರೀತಿ ನಿರ್ಧರಿಸಿದರೆ ಯಾರೂ ತಡೆಯಲಾರರು ಎಂಬುದು ಗೌಡರ ವಿಷಯದಲ್ಲಿ ನಿಜ. ತಮಗೆ ದೊರೆತ ಅವಕಾಶವನ್ನು ಗೌಡರು ಚೆನ್ನಾಗಿಯೇ ಬಳಸಿಕೊಂಡರು. ಹಲವಾರು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡರು.
ತಮಗೆ ಬೆಂಬಲ ನೀಡಿದ ಕಾಂಗ್ರೆಸ್ ನಾಯಕರನ್ನು ಓಲೈಸಿದ್ದರೆ, ಗೌಡರು ಇನ್ನಷ್ಟು ಕಾಲ ಅಧಿಕಾರದಲ್ಲಿ ಇರಬಹುದಿತ್ತೇನೋ. ಕಿಚಡಿ ಸರಕಾರ ನಿಭಾಯಿಸುವ ಕಲೆ ಕರಗತವಾಗುವ ಹಂತದಲ್ಲೇ ಅವರು ನಿರ್ಗಮಿಸಬೇಕಾಗಿ ಬಂದುದು ದುರ್ದೈವ.
ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುತ್ತಿದ್ದಂತೆ, ಅವರ ಸಕ್ರಿಯ ರಾಜಕೀಯ ಕೊನೆಗೊಳ್ಳಬೇಕಿತ್ತು. ಸಾಮಾನ್ಯವಾಗಿ ಮಾಜಿ ಪ್ರಧಾನಿಯಾದವರು ನಿವೃತ್ತಿ ಘೋಷಿಸುವುದು ಸಂಪ್ರದಾಯ. ಆದರೆ ಗೌಡರು ಮಾಜಿ ಪ್ರಧಾನಿಯಾದರೂ, ಸಾರ್ವಜನಿಕ ಜೀವನದಿಂದ ನಿವೃತ್ತರಾಗಲಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ, ಮತ್ತಷ್ಟು ಕ್ರಿಯಾಶೀಲರಾದರು. ಈ ಬಗ್ಗೆ ಅದೆಷ್ಟೇ ಟೀಕೆಗಳು ಬಂದರೂ ಅವರು ತಲೆಕೆಡಿಸಿಕೊಳ್ಳಲಿಲ್ಲ.
ಪಂಚಾಯತಿ ಚುನಾವಣೆಯಿಂದ, ಸಂಸತ್ ಚುನಾವಣೆ ತನಕ ಪಕ್ಷವನ್ನು ಸಂಘಟಿಸಲು ಊರೂರು ಅಲೆದರು, ಪ್ರತಿಭಟನೆಗಳಲ್ಲಿ ಭಾಗವಹಿಸಿದರು. ತಾನು ಪ್ರಧಾನಿಯಾಗಿದ್ದವನು ಎಂಬುದನ್ನೂ ಮರೆತು ನೈಸ್ ಕಾರಿಡಾರ್ ವಿಷಯವಾಗಿ ತಲೆ ಮೇಲೆ ಟವೆಲ್ ಹಾಕಿ ರಸ್ತೆಗಿಳಿದರು. ರಸ್ತೆ ಬದಿಯಲ್ಲಿ ಟವೆಲ್ ಹಾಸಿ ಹೋರಾಟ ಮಾಡಿದರು. 'ಮಾಜಿ ಪ್ರಧಾನಿ' ಎಂಬುದು ಅನೇಕರಿಗೆ ತಡೆಗೋಡೆಯಾದರೆ, ದೇವೇಗೌಡರಿಗೆ ಅದೇ ಪ್ರಮುಖ ಅಸ್ತ್ರವಾಯಿತು. ಹಾಗಾಗಿಯೇ ಗೌಡರು ಇಂದಿಗೂ ತಮ್ಮ ಪಕ್ಷ ಜೆಡಿಎಸ್ ಗೆ ಆಮ್ಲಜನಕ !
ಈ ದೇಶದಲ್ಲಿ ಒಬ್ಬ ಮಾಜಿ ಪ್ರಧಾನಿಯಾಗಿ ಏನೆಲ್ಲಾ ಮಾಡಬಹುದು ಎಂಬುದಕ್ಕೆ ಅವರೇ ನಿದರ್ಶನ. ಈ ದೇಶದಲ್ಲಿ ಅತಿ ಹೆಚ್ಚು ಕಾಲ 'ಮಾಜಿ ಪ್ರಧಾನಿ' ಎಂಬ ಪಟ್ಟವನ್ನು ಅಲಂಕರಿಸಿದವರೂ ಅವರೇ. ಇದನ್ನು ಮಾತ್ರ ಯಾರೂ ಮುರಿಯಲಾರರು.
ಕೇವಲ ಹನ್ನೊಂದು ತಿಂಗಳು ಪ್ರಧಾನಿ ಪದವಿಯಲ್ಲಿದ್ದ ದೇವೇಗೌಡರು, ಅಲ್ಲಿಂದ ಇಳಿದು ಕಾಲು ಶತಮಾನ ಸರಿದರೂ, ಕರ್ನಾಟಕದ ಮತ್ತೊಬ್ಬ ರಾಜಕಾರಣಿಗೆ ಗೌಡರು ಏರಿದ ಎತ್ತರವನ್ನು ಇಂದಿಗೂ ಏರಲು ಸಾಧ್ಯವಾಗಿಲ್ಲ. ಈ ಸಂಗತಿಯಲ್ಲಿ ದೇವೇಗೌಡರ ತಾಕತ್ತು, ವ್ಯಕ್ತಿತ್ವ, ಸಾಮರ್ಥ್ಯ ಅಡಗಿದೆ.
ಕರ್ನಾಟಕದಿಂದ ಎಸ್.ಎಂ.ಕೃಷ್ಣ, ಅನಂತಕುಮಾರ ದಿಲ್ಲಿಯಲ್ಲಿ ಪ್ರಭಾವಿ ಹುದ್ದೆಯಲ್ಲಿದ್ದರೂ, ಅವರಿಗೆ ಪ್ರಧಾನಿ ಪಟ್ಟ ಅನತಿ ದೂರವೇ ಆಗಿತ್ತು. ಕರ್ನಾಟಕದಿಂದ ಮತ್ತೊಬ್ಬ ನಾಯಕ ಆ ಹುದ್ದೆಯನ್ನೇರುವುದು ಸದ್ಯದ ಮಟ್ಟಿಗಂತೂ ಊಹಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಯೋಚಿಸಿದರೆ, ಇಪ್ಪತ್ತೈದು ವರ್ಷಗಳ ಹಿಂದೆ, ದೇವೇಗೌಡರು ಮಾಡಿದ ಸಾಧನೆ ಮೂಗಿನ ಮೇಲೆ ಬೆರಳಿಡುವಂಥದ್ದು.
ಹೀಗಾಗಿ ಗೌಡರು ಪ್ರಧಾನಿ ಪಟ್ಟಕ್ಕೇರಿದ ಆ ದಿನವನ್ನು ಇಂದು ನೆನಪಿಸಿಕೊಳ್ಳುವುದು ಮತ್ತು ಅಲ್ಲಿಂದ ಈ ದಿನದವರೆಗಿನ ವಿದ್ಯಮಾನಗಳನ್ನು ಮೆಲಕು ಹಾಕುವುದು ರಾಜಕಾರಣ ಮತ್ತು ಸಮಾಜಕಾರಣದ ದೃಷ್ಟಿಯಿಂದ ಅತ್ಯಂತ ಮಹತ್ವದ್ದು. ಅವರ ಸಾಧನೆ, ದಾಖಲೆಯನ್ನು ಮುರಿಯುವುದು ಕಷ್ಟಸಾಧ್ಯವೇನೋ. ನಿಜಕ್ಕೂ, ದೇವೇಗೌಡರು ಅಭಿನಂದನಾರ್ಹರು!
-ವಿಶ್ವೇಶ್ವರ್ ಭಟ್