04/02/2026
******ಬ್ರಿಲಿಯಂಟ್ ಅಂಗಳದಲ್ಲಿ ಮಾರ್ದನಿಸಿದ ಪುಣ್ಯಕೋಟಿ ನೃತ್ಯ ಪ್ರಸ್ತುತಿ*******
ಬ್ರಿಲಿಯಂಟ್ ಸಿಬಿಎಸ್ಇ ಶಾಲೆಯಲ್ಲಿ ಜರುಗಿದ ಯುಗಾರಂಭ-2026 ವೇದಿಕೆಯ ಮೇಲೆ ಅಂತರಾಷ್ಟ್ರೀಯ ಖ್ಯಾತಿಯ ಭರತನಾಟ್ಯ ಕಲಾವಿದೆ ವಿದುಷಿ. ದೀಕ್ಷಾ ಭಿಸೆ ಮತ್ತವರ ಸ್ವಯಂಭೂ ಆರ್ಟ್ ಫೌಂಡೇಶನ್ ಸದಸ್ಯರು ಪ್ರಸ್ತುತಪಡಿಸಿದ ಪುಣ್ಯಕೋಟಿ ಗೀತೆಯನ್ನಾಧರಿಸಿದ ನೃತ್ಯಪ್ರಸ್ತುತಿ ನೆರೆದಿದ್ದ ಪ್ರೇಕ್ಷಕರನ್ನು ಅಕ್ಷರಶಃ ಮಂತ್ರಮುಗ್ಧಗೊಳಿಸಿತು.
ತಲೆಮಾರುಗಳಿಂದ ಸತ್ಯದ ಮೌಲ್ಯವನ್ನು ಮನುಷ್ಯನ ಎದೆಯಲ್ಲಿ ಬಿತ್ತುತ್ತಾ ಬಂದಿರುವ ಈ ಜನಪದ ಗೀತೆಯನ್ನು ಕೇಳದವರಿಲ್ಲ. ಅರ್ಬುದ ಎಂಬ ಹಸಿದ ವ್ಯಾಘ್ರನ ಕೈಗೆ ಸಿಲುಕಿದ ಪುಣ್ಯಕೋಟಿ ಗೋವು ತನ್ನ ಕರುವಿಗೆ ಹಾಲುಣಿಸಿ ಬಂದು ನಿನಗೆ ಆಹಾರವಾಗುತ್ತೇನೆ ಎಂದು ಪರಿಪರಿಯಾಗಿ ಅಂಗಲಾಚುವ, ಹುಲಿಯನ್ನು ಒಪ್ಪಿಸಿ ತನ್ನ ಕರುವಿನ ಬಳಿ ಬಂದು ಎದೆಗಪ್ಪಿ ಕಣ್ಣೀರಾಗುವ, ಬಳಗದ ಗೋವುಗಳಲ್ಲಿ ತನ್ನ ಕರುವನ್ನು ನೋಡಿಕೊಳ್ಳಿರೆಂದು ಮೊರೆಯಿಡುವ ಸನ್ನಿವೇಶಗಳು ಪ್ರೇಕ್ಷಕರನ್ನು ಕಣ್ಣೀರಾಗಿಸಿದವು.
‘ಸತ್ಯ ವಾಕ್ಯಕೆ ಮೆಚ್ಚಿ ನಡೆದರೆ ಮೆಚ್ಚನಾ ಪರಮಾತ್ಮನು’ ಎನ್ನುವ ಗೋವು ಕೊಟ್ಟ ಮಾತಿನಂತೆ ಅರ್ಬುದನಿಗೆ ಆಹಾರವಾಗಲು ಮರಳಿ ಬಂದಾಗ, ಪುಣ್ಯಕೋಟಿಯ ಸತ್ಯ ನಿಷ್ಠೆ, ಪ್ರಾಮಾಣಿಕತೆ, ಕರುವನ್ನು ಅನಾಥವನ್ನಾಗಿಸಿ ಪ್ರಾಣತ್ಯಾಗಕ್ಕೆ ನಿಂತಿರುವುದನ್ನು ಕಂಡು ವ್ಯಾಘ್ರನ ಹಸಿವು, ಕ್ರೌರ್ಯ ಕಾಡಿನಲ್ಲಿ ಕರಗಿ ಹೋಗುವ ಸನ್ನಿವೇಶಗಳನ್ನು ತಮ್ಮ ಹಾವ ಭಾವ, ದೇಹ ಭಾಷೆಯಿಂದಲೇ ನೃತ್ಯದ ಮೂಲಕ ಪ್ರಸ್ತುತಪಡಿಸಿದ ನೃತ್ಯಗಾರರ ಪರಕಾಯ ಪ್ರವೇಶವನ್ನು ನೋಡಿ ಪ್ರೇಕ್ಷಕರು ಮೂಕವಿಸ್ಮಿತರಾದರು.
ಬ್ರಿಲಿಯಂಟ್ ಸಿಬಿಎಸ್ಇ ಶಾಲೆಯ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ವಿದುಷಿ. ದೀಕ್ಷಾ ಭಿಸೆ, ಶಾಲಾ ಹಂತದಲ್ಲಿಯೇ ಕಲೆಗೆ ಪ್ರಾಮುಖ್ಯತೆ ನೀಡಿದರೆ ಮಕ್ಕಳಲ್ಲಿ ಸೃಜನಶೀಲತೆ, ಆತ್ಮವಿಶ್ವಾಸ, ಶಿಸ್ತು ಬೆಳೆಯುತ್ತದೆ. ಕಲೆ ನಮ್ಮ ಸಂವೇದನಾಶೀಲತೆಯನ್ನು ಹೆಚ್ಚಿಸುವುದಲ್ಲದೇ ವಿದ್ಯಾರ್ಥಿಗಳ ವ್ಯಕ್ತಿತ್ವದ ಸರ್ವಾಂಗೀಣ ವಿಕಸನಕ್ಕೆ ಅತ್ಯಗತ್ಯ. ಸಂಸ್ಥೆಯವರು ಇಚ್ಛಿಸಿದರೆ ಈ ಭಾಗದ ಮಕ್ಕಳಿಗೆ ಕಲೆಯ ತರಬೇತಿ, ಮಾರ್ಗದರ್ಶನ ನೀಡಲು ನಾವು ಅತ್ಯಂತ ಉತ್ಸುಕರಾಗಿದ್ದೇವೆ ಎಂಬ ಅಭಿಪ್ರಾಯಕ್ಕೆ ಸಂಸ್ಥೆ ಸಕಾರಾತ್ಮಕವಾಗಿ ಸ್ಪಂದಿಸಿರುವುದು ಪಾಲಕರಲ್ಲಿ, ಕಲಾ ಪ್ರೇಮಿಗಳಲ್ಲಿ ಭರವಸೆ ಮೂಡಿಸಿದೆ.