18/09/2025
ಶರಾವತಿ ಕಣಿವೆಯಲ್ಲಿ ವಿದ್ಯುತ್ ಪಂಪ್ಡ್ ಸ್ಟೋರೇಜ್ ಯೋಜನೆ; ಜನ ಆತಂಕ ಪಡಬೇಕಾಗಿಲ್ಲ ಎಂದು ಅಧಿಕಾರಿಗಳ ಸ್ಪಷ್ಟನೆ - ELECTRIC PUMPED STORAGE PROJECT
ಕರ್ನಾಟಕ ವಿದ್ಯುತ್ ನಿಗಮ ನಿಯಮಿತವು ಶರಾವತಿ ಕಣಿವೆಯಲ್ಲಿ ವಿದ್ಯುತ್ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ.
ಕಾರವಾರ (ಉತ್ತರ ಕನ್ನಡ) :ಪ್ರಪಂಚದ ಅತಿದೊಡ್ಡ ಬ್ಯಾಟರಿ ತಂತ್ರಜ್ಞಾನದಂತೆ ಬಳಸಬಹುದಾದ 2000 ಮೆಗಾವ್ಯಾಟ್ ಸಾಮರ್ಥ್ಯದ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಶರಾವತಿ ಕಣಿವೆಯಲ್ಲಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಜಾರಿಗೆ ತರಲು ಮುಂದಾಗಿದೆ. ಎರಡು ಜಲಾಶಯಗಳ ನಡುವೆ ಹೆಚ್ಚುವರಿ ವಿದ್ಯುತ್ ಬಳಸಿಕೊಂಡು ಪೈಪ್ ಲೈನ್ ಮೂಲಕ ನೀರು ಎತ್ತುವ ಹಾಗೂ ಬೇಡಿಕೆ ಇದ್ದಾಗ ಅದನ್ನು ಬಳಸಿಕೊಳ್ಳುವ ಮೂಲಕ ವಿದ್ಯುತ್ ಗ್ರಿಡ್ಗೆ ಸ್ಥಿರತೆ ಒದಗಿಸುವ ಯೋಜನೆ ಜಾರಿಗೆ ತರಲು ಮುಂದಾಗಿದೆ.
ಶರಾವತಿ ಪಿಎಸ್ಪಿ ಯೋಜನೆಯಡಿ 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗಲಿದೆ. ಈ ಭಾರಿ ಪ್ರಮಾಣದ ವಿದ್ಯುತ್ ಉತ್ಪಾದನೆಯ ಈ ಯೋಜನೆಯನ್ನು ಕೆಪಿಸಿಎಲ್ ಅತಿ ಕಡಿಮೆ ಪರಿಸರ ಹಾನಿಯೊಂದಿಗೆ ಸಿದ್ಧಪಡಿಸಿದೆ. ಈ ಯೋಜನೆ ಜಾರಿ ವೇಳೆ ಈಗಾಗಲೇ ನಿರ್ಮಾಣವಾಗಿರುವ ಗೇರುಸೊಪ್ಪ ಮತ್ತು ತಲಕಳಲೆ ಅಣೆಕಟ್ಟೆಗಳನ್ನು ಬಳಸಿಕೊಳ್ಳುವ ಪರಿಣಾಮ ಹೊಸ ಅಣೆಕಟ್ಟೆ ನಿರ್ಮಾಣದಂತಹ ಕಾಮಗಾರಿ ಈ ಯೋಜನೆಯಲ್ಲಿ ಇಲ್ಲ.
ಕಾರ್ಯಪಾಲಕ ಇಂಜಿನಿಯರ್ (ಸಿವಿಲ್) ವಿಜಯ್ ಹಾಗೂ ಕೆಪಿಸಿಎಲ್ನ ಮುಖ್ಯ ಇಂಜಿನಿಯರ್ ರಮೇಶ್ ಅವರು ಮಾತನಾಡಿದ್ದಾರೆ (ETV Bharat)
ಇನ್ನು ಭೂಮಿಯ ಆಳದಲ್ಲಿ ಟನಲ್ (ಸುರಂಗ) ಮೂಲಕ ನೀರು ಹರಿಬಿಡುವ ಮತ್ತು ಅದೇ ಟನಲ್ ಮೂಲಕ ನೀರನ್ನು ಎತ್ತುವಳಿ ಮಾಡುವ ಪರಿಣಾಮ ಸುರಂಗ ನಿರ್ಮಾಣದ ಭೂಮಿಯ ಮೇಲ್ಮೈನಲ್ಲಿ ಇರುವ ಮರ, ಗಿಡ, ಪರಿಸರಕ್ಕೆ ಯಾವುದೇ ಹಾನಿ ಆಗುವುದಿಲ್ಲ. ಪ್ರಸ್ತುತ ಇರುವ ರಸ್ತೆಯನ್ನೇ ಬಳಕೆ ಮಾಡಿಕೊಳ್ಳಲು ಉದ್ದೇಶಿಸಲಾಗಿದ್ದು, ಪ್ರಸ್ತುತ 3.5 ಮೀಟರ್ ಇರುವ ಈ ರಸ್ತೆಯನ್ನು ಅಗತ್ಯ ವಸ್ತುಗಳ ರವಾನೆಗೆ ಅನುವಾಗುವಂತೆ 5.5 ಮೀಟರ್ ವಿಸ್ತರಿಸಲು ಯೋಜಿಸಲಾಗಿದೆ. ಭೂಮಿಯ ಒಳಗೆ ಪಂಪ್ ಹೌಸ್ ಸೇರಲು ಸುರಂಗ ಪ್ರವೇಶಿಸುವ ಸ್ಥಳದಲ್ಲಿ ಮಾತ್ರ ಅಲ್ಪ ಪ್ರಮಾಣದ ಅರಣ್ಯ ಪ್ರದೇಶ ಬಳಕೆ ಮಾಡಿಕೊಳ್ಳಲಾಗುವುದು. ಯೋಜನೆ ಪೂರ್ಣಗೊಂಡ ನಂತರ ಸುರಂಗದ ಪ್ರವೇಶ ದ್ವಾರದ ಸುತ್ತಮುತ್ತ ಅರಣ್ಯ ಪುನರ್ ನಿರ್ಮಾಣವಾಗಲಿದೆ. ಈ ಸಂಬಂಧ ಈಗಾಗಲೇ ರಾಜ್ಯ ಅರಣ್ಯ ಇಲಾಖೆ, ಕೇಂದ್ರ ಅರಣ್ಯ ಇಲಾಖೆ ಹಲವು ಭಾರಿ ಸ್ಥಳ ಪರಿಶೀಲನೆ ನಡೆಸಿ ಕನಿಷ್ಠ ಗಿಡ ಮರಗಳ ಕಡಿತದೊಂದಿಗೆ ಯೋಜನೆ ಜಾರಿ ಮಾಡಲು ಕ್ರಮವಹಿಸಲಾಗಿದೆ ಎಂದು ಕಾರ್ಯಪಾಲಕ ಇಂಜಿನಿಯರ್ (ಸಿವಿಲ್) ವಿಜಯ್ ತಿಳಿಸಿದ್ದಾರೆ.
ಸಿಂಗಳೀಕಗಳ ರಕ್ಷಣೆ :ಶರಾವತಿ ಪಿಎಸ್ಪಿ ಯೋಜನೆ ಜಾರಿ ಪ್ರದೇಶದಲ್ಲಿ ಅಪರೂಪದ ಸಿಂಗಳೀಕಗಳು ಸಂಚರಿಸುತ್ತವೆ ಎಂದು ಅರಣ್ಯ ಇಲಾಖೆಯು ತಿಳಿಸಿದೆ. ಇವರುಗಳ ಸಂಚಾರಕ್ಕೆ ಸಹ ತೊಡಕಾಗದಂತೆ ಕ್ರಮ ವಹಿಸಲು ಕೆಪಿಸಿ ಮುಂದಾಗಿದೆ. ಯೋಜನೆ ಜಾರಿ ವೇಳೆ ಅರಣ್ಯ ಇಲಾಖೆ ನೇತೃತ್ವದಲ್ಲಿ ಸಿಂಗಳೀಕಗಳ ಸಂಚಾರಕ್ಕೆ ಯಾವುದೇ ಬಾದಕ ಆಗದಂತೆ ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ವೇಳೆ ಅನುಸರಿಸಲಾಗಿದ್ದ ಮೇಲ್ಸೆತುವೆ (ಟ್ರೇ ಕ್ಯಾನೋಪಿ)ಗಳನ್ನು ಅರಣ್ಯ ಇಲಾಖೆ, ಸೂಚನೆ, ಮಾರ್ಗದರ್ಶನ ಮತ್ತು ಮೇಲುಸ್ತುವಾರಿಯಲ್ಲಿ ನಿರ್ಮಾಣ ಮಾಡುವ ಷರತ್ತಿನೊಂದಿಗೆ ಕೆಪಿಸಿ ಯೋಜನೆ ಜಾರಿಗೆ ಮುಂದಾಗಿದೆ.
ಶರಾವತಿ ಕಣಿವೆ (ETV Bharat)
ಕನಿಷ್ಠ ನೀರಿನ ಅಗತ್ಯ : ಶರಾವತಿ ಪಿಎಸ್ಪಿ- ಪಂಪ್ಡ್ ಸ್ಟೋರೇಜ್ ಯೋಜನೆ ಆಗಿರುವ ಪರಿಣಾಮ ಅತಿ ಕಡಿಮೆ ಮತ್ತು ನೀರಿನ ದೀರ್ಘಾವಧಿ ಬಳಕೆಯೇ ಈ ಯೋಜನೆಯ ವಿಶೇಷತೆ. ಲಿಂಗನಮಕ್ಕಿ ಜಲಾಶಯದಲ್ಲಿ ವಾರ್ಷಿಕ ಸರಾಸರಿ 140 ರಿಂದ 220 ಟಿಎಂಸಿ ನೀರು ಸಂಗ್ರಹವಾಗುತ್ತದೆ. ಈ ನೀರನ್ನು ಬಳಕೆ ಮಾಡಿಕೊಂಡು ಈಗಾಗಲೇ ಜಲ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಈ ನೀರಿನ ಬಳಕೆಯಿಂದ ಜಲ ವಿದ್ಯುತ್ ಉತ್ಪಾದನೆ ನಂತರ ಕೃಷಿ, ಕುಡಿಯಲು, ಮೀನುಗಾರಿಗೆ ಸೇರಿದಂತೆ ವಿವಿಧ ರೀತಿಯಲ್ಲಿ ಸಾರ್ವಜನಿಕರು ಮತ್ತು ರೈತರು ಬಳಕೆ ಮಾಡಿಕೊಂಡ ನಂತರ ಆ ನೀರು ಸಮುದ್ರ ಸೇರುತ್ತಿದೆ. ಶರಾವತಿ ಪಿಎಸ್ಸಿ ಜಾರಿ ನಂತರವೂ ಈಗಿನ ಶರಾವತಿ ನೀರಿನ ಬಳಕೆದಾರರಿಗೆ ಯಾವುದೇ ರೀತಿಯಲ್ಲಿ ನೀರಿನ ಪ್ರಮಾಣದಲ್ಲಿ ಕೊರತೆ ಆಗುವುದಿಲ್ಲ.
ಶರಾವತಿ ಪಿಎಸ್ಪಿ ಯೋಜನೆಯಡಿ ನೀರನ್ನು ಮರುಬಳಕೆ ಮಾಡುವುದರಿಂದ ಮತ್ತು ಮುಂದಿನ 50-60 ವರ್ಷಗಳ ಅವಧಿಗೆ ಒಮ್ಮೆ ಮಾತ್ರ ಕೇವಲ 0.37 ಟಿಎಂಸಿ ನೀರನ್ನು ಬಳಕೆ ಮಾಡಲಾಗುವುದು. ಇದಕ್ಕಿಂತ ಹೆಚ್ಚಿನ ನೀರನ್ನು ಬಳಕೆ ಮಾಡಲು ಅಥವಾ ಅಣೆಕಟ್ಟೆಯ ಸಾಮರ್ಥ್ಯಕ್ಕಿಂತ ಹೆಚ್ಚಿನ ನೀರನ್ನು ಸಂಗ್ರಹಿಸಲು ಅವಕಾಶವೇ ಇಲ್ಲದಿರುವುದರಿಂದ ಎಲ್ಲೆಡೆ ಈಗಿನಂತೆಯೇ ನೀರು ಹರಿಯಲಿದೆ ಮತ್ತು ಸಮುದ್ರಕ್ಕೂ ನೀರು ಸೇರಲಿದೆ. ಹೀಗಾಗಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ನೀರಿನ ಕೊರತೆ ಅಥವಾ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುವುದಿಲ್ಲ.
ಗುಡ್ಡ ಕುಸಿತ ಸಾಧ್ಯತೆ ಇಲ್ಲ :ಶರಾವತಿ ಪಿಎಸ್ಪಿ ಯೋಜನೆ ಜಾರಿಯಿಂದ ಗುಡ್ಡ ಕುಸಿತದ ಭೀತಿ ಬಗ್ಗೆ ಸಾರ್ವಜನಿಕರು ಆತಂಕಗೊಂಡಿರುವ ಬಗ್ಗೆಯೂ ಕೆಪಿಸಿ ಸ್ಪಷ್ಟನೆ ನೀಡಿದ್ದು, ಶರಾವತಿ ಪಿಎಸ್ಪಿ ಯೋಜನೆ ಜಾರಿಗೂ ಮುನ್ನ ಪ್ರಾಥಮಿಕ ಹಂತದಲ್ಲಿ ಕೇಂದ್ರ ಸರ್ಕಾರದ ಭಾರತೀಯ ಭೂ ಸರ್ವೇಕ್ಷಣಾ ಇಲಾಖೆಯೂ ಈ ಪ್ರದೇಶದಲ್ಲಿ ಸರ್ವೆ ಕಾರ್ಯ ನಡೆಸಿದ್ದು, ಪಿಎಸ್ಪಿ ಜಾರಿ ಪ್ರದೇಶದಲ್ಲಿ ಸುರಂಗ ನಿರ್ಮಾಣ ಅಥವಾ ಕಾಮಗಾರಿಯಿಂದ ಭೂ ಕುಸಿತ ಸಾಧ್ಯತೆ ಆಗುವುದಿಲ್ಲ ಎಂಬುದನ್ನು ದೃಢೀಕರಿಸಿದ ನಂತರವೇ ಯೋಜನೆಗೆ ಅನುಮತಿ ನೀಡಿರುತ್ತದೆ. ಹೀಗಾಗಿ ಇಲ್ಲಿ ಗುಡ್ಡ ಕುಸಿತ ಸಾಧ್ಯತೆಗಳೂ ಇರುವುದಿಲ್ಲ.
ಜಲಾಶಯ (ETV Bharat)
ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಕೆ ಸಾಧ್ಯ : ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಡಿ 2000 ಮೆಘಾ ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ. ಹಗಲು ವೇಳೆ ನವೀಕರಿಸಬಹುದಾದ ಇಂಧನ ಹೇರಳವಾಗಿ ಲಭ್ಯವಾಗಲಿದ್ದು, ಈ ಸಮಯದಲ್ಲಿ ಕೆಳಗಿನ ಜಲಾಶಯದಿಂದ ಮೇಲಿನ ಜಲಾಶಯಕ್ಕೆ ನೀರು ಪಂಪ್ ಮಾಡಲಾಗುವುದು. ಹೆಚ್ಚು ಬೇಡಿಕೆ ಅವಧಿಯಲ್ಲಿ ಅಥವಾ ರಾತ್ರಿ ವೇಳೆ ವಿದ್ಯುತ್ ಉತ್ಪಾದಿಸಿ ಗ್ರಾಹಕರಿಗೆ ಪೂರೈಸಲಾಗುವುದು. ಹೀಗೆ, ಸೋಲಾರ್ ಮತ್ತು ಗಾಳಿಯಿಂದ ಉತ್ಪಾದನೆಯಾಗುತ್ತಿರುವ ವಿದ್ಯುತ್ ವ್ಯರ್ಥವಾಗದಂತೆ ಉಳಿಸಿಕೊಂಡು ಅದನ್ನು ಬೇಡಿಕೆ ಅವಧಿಯಲ್ಲಿ ತ್ವರಿತವಾಗಿ ಉತ್ಪಾದಿಸಿ ಗ್ರಾಹಕರಿಗೆ ಸರಬರಾಜು ಮಾಡಲು ಪಿಎಸ್ಪಿಗಳಿಂದ ಮಾತ್ರ ಸಾಧ್ಯವಾಗಲಿದೆ.
ಇಲ್ಲಿ ಪಿಎಸ್ಪಿಗಳನ್ನು “ನೀರಿನ ಬ್ಯಾಟರಿ' ಎಂದು ಕರೆಯಬಹುದಾಗಿದೆ. ಇನ್ನು ಯಾವುದೇ ವಿದ್ಯುತ್ ಸಂಗ್ರಹ ವ್ಯವಸ್ಥೆಯಲ್ಲಿ ವಿದ್ಯುತ್ ನಷ್ಟ ಇರುತ್ತದೆ. ಹೀಗಾಗಿಯೇ ಪಿಎನ್‌ಪಿಗಳಲ್ಲಿ ವಿದ್ಯುತ್ ಉತ್ಪಾದನೆಗಿಂತ ಅಧಿಕ ಮೊತ್ತದ ವಿದ್ಯುತ್ ಬಳಕೆ ಆದರೂ ಸಹ ಪಿಎಸ್ಪಿಗಳ ನಿರ್ಮಾಣ-ನಿರ್ವಹಣೆ ನಂತರವೂ ಅತಿ ಕಡಿಮೆ ದರದಲ್ಲಿ ವಿದ್ಯುತ್ ಉತ್ಪಾದನೆ ಆಗಲಿದೆ. ಹೀಗಾಗಿಯೇ, ಜಗತ್ತಿನಾದ್ಯಂತ ಪಿಎಸ್ಸಿಗಳನ್ನು ವಿದ್ಯುತ್ ಸಂಗ್ರಹದ ಶ್ರೇಷ್ಠ ಪದ್ಧತಿ ಎಂದು ಕರೆಯಲಾಗುತ್ತಿದೆ.
ಅತೀ ಕಡಿಮೆ ಭೂಮಿ ಬಳಕೆ :2000 ಮೆಘಾ ವ್ಯಾಟ್ ವಿದ್ಯುತ್ ಉತ್ಪಾದನೆಗೆ ಅತೀ ಕಡಿಮೆ ಭೂಮಿ ಬಳಕೆ ಮಾಡಿಕೊಳ್ಳುತ್ತಿರುವುದು ಶರಾವತಿ ಪಿಎಸ್ಪಿ ಯೋಜನೆಯ ಮತ್ತೊಂದು ಮಹತ್ವದ ಅಂಶವಾಗಿದೆ. ಈ ಯೋಜನೆಯಡಿ ಕೇವಲ 100.645 ಹೆಕ್ಟೇರ್ ಪ್ರದೇಶ (248.7 ಎಕರೆ ಪ್ರದೇಶ)ವನ್ನು ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಈ ಪೈಕಿ 54.155 ಹೆಕ್ಟೇರ್ ಅರಣ್ಯ ಪ್ರದೇಶವಾಗಿದ್ದರೆ, 46.49 ಹೆಕ್ಟೇರ್ ಅರಣ್ಯೇತರ ಪ್ರದೇಶವಾಗಿದೆ. ಅರಣ್ಯ ಪ್ರದೇಶ ಬಳಕೆ ವೇಳೆ ಕೈಗೊಳ್ಳಲಾಗುವ ಮುನ್ನೆಚ್ಚರಿಕೆ ಕ್ರಮಗಳನ್ನು ಕೆಪಿಸಿ ಕೈಗೊಳ್ಳಲಿದೆ ಮತ್ತು ಈ ಬಗ್ಗೆ ಅರಣ್ಯ ಇಲಾಖೆ, ವನ್ಯಜೀವಿ ಮಂಡಳಿಗಳೂ ಸಹ ಸೂಕ್ತ ಸಮಯದಲ್ಲಿ ಮೇಲುಸ್ತುವಾರಿ, ಪರಿಶೀಲನೆ, ಪರಾಮರ್ಶೆ ನಡೆಸಲಿವೆ. ಅರಣ್ಯ ಪ್ರದೇಶಕ್ಕೆ ಸಂಬಂಧಿಸಿದಂತೆ ಕೆಪಿಸಿ ಇತರೆಡೆ ಅರಣ್ಯ ಪ್ರದೇಶ ಪುನರ್ ಸ್ಥಾಪಿಸಲು ಅರಣ್ಯ ಇಲಾಖೆಗೆ ಸ್ವಾಧೀನದಷ್ಟೇ ಪ್ರದೇಶ ಮತ್ತು ಅರಣ್ಯ ಪುನರ್ ಸ್ಥಾಪನೆಗೆ ತಗಲುವ ವೆಚ್ಚವನ್ನೂ ನೀಡುತ್ತಿದೆ.
ಸಾರ್ವಜನಿಕ ಪರಾಮರ್ಶೆಗೆ ದಾಖಲೆ ಲಭ್ಯ : 'ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಸರ್ಕಾರದ ಯೋಜನೆ ಆಗಿದೆ ಮತ್ತು ಈ ಯೋಜನೆ ಜಾರಿ ಏನು? ಎತ್ತ? ಎಂಬ ಬಗ್ಗೆ ಸಾರ್ವಜನಿಕರಿಗೆ ತಿಳಿಸುವ ಸಲುವಾಗಿ ಯೋಜನೆ ಜಾರಿ ವ್ಯಾಪ್ತಿಯ ಜಿಲ್ಲೆಗಳ ಸಂಬಂಧಿತ ಜಿಲ್ಲಾಧಿಕಾರಿ ಕಚೇರಿ ಹಾಗೂ ಪಂಚಾಯ್ತಿ ಕಚೇರಿಗಳಲ್ಲಿ ಯೋಜನೆಯ ಖಾಸಗಿ ಮತ್ತು ಭದ್ರತೆ ದೃಷ್ಟಿಯ ವಿವರಗಳ ಹೊರತಾಗಿ ಸಮರ್ಪಕ ವಿವರಗಳುಳ್ಳ ಪರಿಸರ ಪರಿಣಾಮ ಮೌಲ್ಯಮಾಪನ ವರದಿಗಳನ್ನು ಈ ಕಚೇರಿಗಳಲ್ಲಿ ಇರಿಸಲಾಗಿದೆ. ಇದರ ಸಾಫ್ಟ್ ಕಾಪಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವೆಬ್‌ಸೈಟ್‌ನಲ್ಲೂ ಲಭ್ಯವಿದೆ. ಸಾರ್ವಜನಿಕರು ಈ ವಿವರಗಳನ್ನು ಖುದ್ದು ಪರಿಶೀಲಿಸಲು ಅವಕಾಶ ಮಾಡಿಕೊಡಲಾಗಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಬಹುದು. ಹೀಗಾಗಿ, ಕರ್ನಾಟಕ ಸರ್ಕಾರದಿಂದ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಮೂಲಕ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಸಂಬಂಧಿಸಿದಂತ ಪರಿಸರವಾದಿಗಳು, ಹೋರಾಟಗಾರರು ಮಾತ್ರವಲ್ಲದೇ, ಸ್ಥಳೀಯರಿಗೂ ಯಾವುದೇ ಆತಂಕ ಬೇಡ' ಎಂದು ಕೆಪಿಸಿಎಲ್ನ ಮುಖ್ಯ ಇಂಜಿನಿಯರ್ ರಮೇಶ್ ತಿಳಿಸಿದ್ದಾರೆ.
ಪಂಪ್ಡ್ ಸ್ಟೋರೇಜ್ ಯೋಜನೆ ಎಂದರೇನು? : ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಜಗತ್ತಿನ ಅತಿದೊಡ್ಡ ಬ್ಯಾಟರಿ ತಂತ್ರಜ್ಞಾನವೆಂದು ಪರಿಗಣಿಸಲಾಗುತ್ತಿದೆ. ಇದನ್ನು ಎರಡು ಜಲಾಶಯಗಳ ಮಧ್ಯೆ ಕಾರ್ಯಗತಗೊಳಿಸಲಾಗುತ್ತದೆ. ಹೆಚ್ಚುವರಿ ವಿದ್ಯುತ್ ಇದ್ದಾಗ ನೀರನ್ನು ಕೆಳಗಿನ ಜಲಾಶಯದಿಂದ ಮೇಲಿನ ಜಲಾಶಯಕ್ಕೆ ಪಂಪ್ ಮಾಡಿ ಶೇಖರಿಸಲಾಗುತ್ತದೆ. ವಿದ್ಯುತ್ ಬೇಡಿಕೆ ಹೆಚ್ಚಾದಾಗ ಆ ನೀರನ್ನು ಬಳಸಿ ವಿದ್ಯುತ್ ಉತ್ಪಾದಿಸಿ ಪೂರೈಸಲಾಗುತ್ತದೆ. ಇದಕ್ಕಾಗಿ ಹೊಸ ಜಲಾಶಯಗಳನ್ನು ನಿರ್ಮಿಸುವ ಅಗತ್ಯವಿಲ್ಲ. ಹೆಚ್ಚು ಬೇಡಿಕೆ ಅವಧಿಯಲ್ಲಿ ವಿದ್ಯುತ್ ಉತ್ಪಾದಿಸಲು ಅನುಕೂಲವಾಗುವುದರಿಂದ ಇದು ಗ್ರಿಡ್ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.