02/11/2024
"ಸಾಂಸ್ಕೃತಿಕ ಪಲ್ಲಟದ ಪಳೆಯುಳಿಕೆ-ದೀಪಾವಳಿ ಹಬ್ಬ"
ಮೈಸೂರು ನಾಯಕರಲ್ಲಿ ದೀಪಾವಳಿ ಆಚರಿಸದ ಒಂದು ವರ್ಗದ ಜನರಿದ್ದಾರೆ ಎಂಬುದು ಎಷ್ಟು ಜನರಿಗೆ ತಿಳಿದಿದೆ..
ಇವರ ಕುಲ (ಬೆಡಗು)ದ ಹೆಸರು "ರಾಕ್ಷಸ/ರಕ್ಕಸ" ಕುಲ. ಇವರು ದೀಪಾವಳಿಯ ದಿನದಂದು ಮನೆ ಮುಂದೆ ಒಣ ತೆಂಗಿನ ಗರಿಗಳಿಗೆ ಬೆಂಕಿ ಹಚ್ಚಿ ಶೋಕಾಚರಣೆ ಮಾಡುತ್ತಾರೆ. ಇವರು ತಮ್ಮನ್ನು ಮಹಾಬಲಿಯ ವಂಶದವರೆಂದು ಗುರುತಿಸಿಕೊಳ್ಳುತ್ತಾರೆ. ಈ ಜನರ ಕುಲದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರು. ಜೈನರು ಈಕೆಯನ್ನು ಜೈನ ಯಕ್ಷಿಣಿಯಲ್ಲಿ ಓರ್ವಳಾದ "ಚಾಮುಂಡಿ" ಎನ್ನುವರು. ಈ ರಕ್ಕಸ ಕುಲದ ನಾಯಕರು ಮಹಾಬಲಿಯು ಸ್ಥಾಪಿಸಿದನೆಂದು ನಂಬಲ್ಪಟ್ಟ ಶ್ರೀ ಮಹಾಬಲೇಶ್ವರ ಸ್ವಾಮಿಯನ್ನು ಕೂಡ ಆರಾಧಿಸುವರು.
ಇವರ ದಾಯದಿ ಕುಲದವರು "ಗಜ/ಆನೆ" ಕುಲದವರು. ಇವರು ತಲಕಾಡು ಸುತ್ತಮುತ್ತಾ ಕಂಡುಬರುವರು. ಇವರು ಗಂಗವಂಶದ ಕೊನೆಯ ಅರಸನೆಂದು ಗುರುತಿಸಿಕೊಂಡ ರಕ್ಕಸ ಶ್ರವಣ ಚಕ್ರವರ್ತಿಯ ವಂಶದವರೆಂದು ಕರೆದುಕೊಳ್ಳುವರು. ಹಾಗೂ ಈ ಶ್ರವಣ ಚಕ್ರವರ್ತಿಗೆ ದೀಪಾವಳಿಯಂದೇ ತಲೆಮಲೆಯ ಶ್ರವಣಬೋಳಿಯಲ್ಲಿ ಶ್ರಾದ್ಧ (ತಿಥಿ) ಕಾರ್ಯ ಮಾಡುವರು.
ಈ ಶ್ರವಣ ಚಕ್ರವರ್ತಿಯನ್ನು ಓರ್ವ ಜೈನಯತಿಯೆಂದು ದೇವಚಂದ್ರ ಕವಿಯು ತನ್ನ ರಾಜಾವಳಿ ಕಥಾಸಾರ ಕೃತಿಯಲ್ಲಿ ಗುರುತಿಸಿರುವನು. ಈ "ಗಜ" ವಂಶದ ನಾಯಕರ ಕುಲದೇವತೆ "ರಾಕಸಮ್ಮ" ಎಂಬ ದೇವತೆ. ಈಕೆಯನ್ನು ಜೈನರ ಯಕ್ಷಿಣಿಯಾದ ಅಂಬಿಕಾದೇವಿ ಅಥವಾ ಕೂಷ್ಮಾಂಡಿನಿ ದೇವಿ ಎಂತಲೂ ಕರೆಯುವರು.
ರಕ್ಕಸ ಹಾಗೂ ಗಜ ಕುಲದವರ ಮತ್ತೊಂದು ದಾಯದಿ ವಂಶ "ಮಹಿಷ" (ಎರುಮೈ/ಎಮ್ಮೆ/ಎನುಮಲೋರ್) ಕುಲದ ಜನರು. ಇವರೆಲ್ಲರೂ "ಗಂಗ" ಹೆಸರಿನಡಿ ಕ್ರಮವಾಗಿ ತೊರೆ ಸೀಮೆಯನ್ನು (ಕಾವೇರಿ ಹಾಗೂ ಕಪಿಲಾ ನಡುವಣ ಪ್ರದೇಶ) ಆಳಿದ್ದಾಗಿ ಪ್ರತೀತಿ ಹೊಂದಿರುವರು. ಇವರು ಮಹಿಷಾಸುರ ಮರ್ಧಿನಿ ಅಮ್ಮನವರನ್ನು ತಮ್ಮ ಕುಲದೇವತೆಯಾಗಿ ಆರಾಧಿಸುವರು. ಈಕೆಯನ್ನು ಜೈನರಲ್ಲಿ ವಾಸಂತಿಕಾದೇವಿ ಎಂದೂ ಕರೆಯಲಾಗಿದೆ.
ತಾವು ಆದಿಶಕ್ತಿಯ ಕುಲದವರೆಂದು ಗುರುತಿಸಲ್ಪಡುವ, ತಮ್ಮ ಯುದ್ಧ ಪರಂಪರೆಯ ಭಾಗವಾಗಿ ಶಾಕ್ತ ಆರಾಧನೆಯನ್ನೇ ಪ್ರಮುಖ ಆಚಾರವಾಗಿ ಹೊಂದಿರುವ ನಾಯಕ ಜನಾಂಗದಲ್ಲಿ, ರಾಕ್ಷಸ ಕುಲದವರೆಂದು ಗುರುತಿಸಲ್ಪಡುವ ಜನರಿರುವುದು ಹಾಗೂ ಪರಸ್ಪರ ಸಂಬಂಧ ಹೊಂದಿರುವುದು ಒಂದು ಸೋಜಿಗದಂತೆಯೇ ತೋರುವುದು.
ಅಲ್ಲದೇ ಇಂದು ಕರ್ಮಟ ಹಿಂದೂಗಳಾಗಿ, ಪ್ರಾಣಿಜನ್ಯ ಆಹಾರ ಸಂಸ್ಕೃತಿಯನ್ನು ಪ್ರಮುಖವಾಗಿ ಹೊಂದಿರುವ ನಾಯಕರಿಗೂ ಸಾತ್ವಿಕ ಜೈನ ಸಂಸ್ಕೃತಿಗೂ ಹೇಗೆ ಸಂಬಂಧ ಎಂಬುದು ನನಗಂತೂ ಇಲ್ಲಿಯವರೆಗೂ ಒಂದು ಜಿಜ್ಞಾಸೆಯಾಗಿದೆ.
ಈ ಜಿಜ್ಞಾಸೆಯ ನಡುವೆ "ಆರ್ಯ-ದ್ರಾವಿಡ" ಸಂಘರ್ಷದ ಸಿದ್ಧಾಂತ ಎಲ್ಲಿಗೆ ತೂರಿಸಲಾಗುವುದು? ನನಗಂತೂ ಗೊತ್ತಿಲ್ಲ...
ಅಂದಹಾಗೆ ನಾಡಿನ ಸಮಸ್ತ ಕನ್ನಡಿಗರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು🎉🎊
✍🏽ಪಾಳೇಗಾರ್ ದೀಪಕ್, ಮೈಸೂರು (02/ನವೆಂಬರ್/2024)
ಮಾಹಿತಿ ಮೂಲ:
೧. ಕಾಸ್ಟ್ ಅಂಡ್ ಟ್ರೈಬ್ಸ್ ಆಫ್ ಸೌಥ್ ಇಂಡಿಯಾ, Vol-VII, 1909.
೨. ಹೆಗ್ಗಡೆ ದೇವನಕೋಟೆ ತಾಲ್ಲೂಕು ಗೆಜೆ಼ಟಿಯರ್
೩. ಹಿರಿಯ ವಕ್ತೃಗಳು ಸಾಧರ ಪಡಿಸಿದ ಕುಲಮೂಲ ಕಥನ