06/05/2026
ಮಡಿಕೇರಿ ತಾಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಐತಿಚಂಡ ರಮೇಶ್ ಉತ್ತಪ್ಪ ಅವರಿಗೆ ಅಭಿನಂದನೆಗಳು
ಮಡಿಕೇರಿ ತಾಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ, ಕವಿ, ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಆಯ್ಕೆಯಾಗಿದ್ದಾರೆ.
ಐತಿಚಂಡ ರಮೇಶ್ ಉತ್ತಪ್ಪ ಅವರು ಕೊಡಗು ಮೂಲದ ಹಿರಿಯ ಪತ್ರಕರ್ತರು ಮತ್ತು ಹೆಸರಾಂತ ಲೇಖಕರು. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕರಡ ಗ್ರಾಮದಲ್ಲಿ ಜನಿಸಿದ ಇವರು ತಮ್ಮ ವಿದ್ಯಾಭ್ಯಾಸವನ್ನು ಕೊಡಗು ಜಿಲ್ಲೆ ಮತ್ತು ಮೈಸೂರಿನಲ್ಲಿ ಪೂರೈಸಿದ್ದಾರೆ. ಅವರು ಕನ್ನಡ ಜಾನಪದ ಮತ್ತು ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ವೃತ್ತಿಜೀವನ ಮತ್ತು ಸಾಹಿತ್ಯ ಕೃಷಿಯನ್ನು ಪತ್ರಿಕೋದ್ಯಮದ ಮೂಲಕ ಪ್ರಾರಂಭಿಸಿದ ಇವರು ದೀರ್ಘಕಾಲದಿಂದ ಪತ್ರಿಕೋದ್ಯಮದಲ್ಲಿದ್ದು, ಪ್ರಸ್ತುತ ಮೈಸೂರಿನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಸ್ಥಾನಿಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ರಮೇಶ್ ಉತ್ತಪ್ಪ ಅವರು ಇದುವರೆಗೆ 40ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ವನ್ಯಜೀವಿ ಸಾಹಿತ್ಯದಲ್ಲಿ ಆಸಕ್ತರಾಗಿದ್ದು, ವಿಶೇಷವಾಗಿ ಆನೆಗಳ ಬಗ್ಗೆ ಅಪಾರ ಜ್ಞಾನ ಹೊಂದಿರುವ ಇವರು, ಆನೆಗಳ ಕುರಿತೇ ಸುಮಾರು 10 ಪುಸ್ತಕಗಳನ್ನು ಬರೆದಿದ್ದಾರೆ. ಕೊಡುವ ಭಾಷೆಯಲ್ಲಿಯೂ ಹಲವಾರು ಕೃತಿಗಳನ್ನು ರಚಿಸಿದ್ದಾರೆ.
ಪತ್ರಕರ್ತ ರಮೇಶ್ ಉತ್ತಪ್ಪ ಅವರ ಕೆಲವು ಗಮನಾರ್ಹ ಕೃತಿಗಳೆಂದರೆ, ಅಭಿಮನ್ಯು ದಿ ಗ್ರೇಟ್, ಮೈಸೂರು ದಸರಾದ ಅಂಬಾರಿ ಆನೆ ಅಭಿಮನ್ಯುವಿನ ಕುರಿತಾದ ಪುಸ್ತಕ.
ಆನೆ ಲೋಕದ ವಿಸ್ಮಯ, ಆನೆಗಳ ಪ್ರಪಂಚದ ಕುರಿತಾದ ಮಾಹಿತಿ ಹೊಂದಿರುವ ಕೃತಿ (ಇದು 'ದಿ ಟಾಕಿಂಗ್ ಎಲಿಫೆಂಟ್' ಹೆಸರಿನಲ್ಲಿ ಇಂಗ್ಲಿಷ್‌ಗೂ ಅನುವಾದಗೊಂಡಿದೆ).
ಕುಶಾ ಕಿ ಕಹಾನಿ, ಕೊಡಗಿನ ದುಬಾರೆ ಆನೆ ಶಿಬಿರದ ಕುಶ ಎಂಬ ಆನೆಯ ಕುರಿತಾದ ಕಥೆ.
ಸಾವಿನ ಸತ್ಯ, ದಸರಾ ಆನೆ ಅರ್ಜುನನ ಸಾವಿನ ಕುರಿತಾದ ತನಿಖಾ ವರದಿ ಒಳಗೊಂಡ ಕೃತಿ.
ಇವರ 'ಕೊಡಗಿನ ಆಟಿ ತಿಂಗಳ ಆಚರಣೆಯ ಅಚ್ಚರಿಗಳು' ಎಂಬ ಲೇಖನವು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬಿ.ಎಸ್ಸಿ ಪಠ್ಯಪುಸ್ತಕದಲ್ಲಿಯೂ ಸೇರ್ಪಡೆಯಾಗಿದೆ.
ಮಡಿಕೇರಿ ತಾಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೇಳನವು ಮಡಿಕೇರಿ ತಾಲೂಕಿನ ಕಡಂಗ (ಅರಪಟ್ಟು) ಗ್ರಾಮದಲ್ಲಿ 20.05.2026 ರಂದು ನಡೆಯಲಿದೆ.