07/10/2025
ಹೊಸ ಕಾಂತಾರ ಸಿನೆಮಾ ರಿಲೀಸ್ ಆದಾಗ ಒಂದು ವರ್ಗ ಈ ಸಲ ಕೂಡ ವಿರೋಧಿಸಿದೆ.
ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಈ ಸಿನೆಮಾ ಬಗ್ಗೆ ಒಳ್ಳೆಯ ಅಭಿಪ್ರಾಯ ಕೇಳಿಬಂದ್ರು ಕರ್ನಾಟಕದ ಅವಳಿ ಜಿಲ್ಲೆಗಳಾದ ಉಡುಪಿ ದಕ್ಷಿಣ ಕನ್ನಡ ಕಡೆ ಮೆಚ್ಚಿಕೊಂಡಷ್ಟೇ ನಕಶಿಖಾಂತ ವಿರೋಧ ವ್ಯಕ್ತಪಡಿಸಿದ ಉದಾಹರಣೆಗಳು ಕಾಣಸಿಗ್ತಿವೆ.
ಅದಕ್ಕೆ ಪ್ರತ್ಯುತ್ತರವಾಗಿ ಒಂದಿಷ್ಟು ಜನ ಲಾಜಿಕ್ ಅನ್ಸರ್ ಕೂಡ ಕೊಟ್ಟಿದ್ದಾರೆ, ಕಾಂತಾರ ತಪ್ಪಾದರೆ ದೇವಿ ಮಹಾತ್ಮೆ ಯಕ್ಷಗಾನ, ದೈವದ ಹೆಸರಲ್ಲಿ ಮಾಡಿರುವಂತ ನಾಟಕಗಳೂ ತಪ್ಪು, ಒಂದಿಷ್ಟು ಮುಂದೆ ಹೋಗಿ ಕನ್ನಡಿಗರ ಆರಾಧ್ಯ ದೈವ ವರನಟ ಡಾ.ರಾಜ್ ಅವರ ಅಭಿನಯದ ಕೆಲವು ಚಿತ್ರಗಳನ್ನು ಕೂಡ ಪ್ರಸ್ತಾಪ ಮಾಡಿರ್ತಾರೆ.
ಕಾಂತಾರಾ ಸಿನಿಮಾ ಮೆಚ್ಚಿಕೊಂಡವರು obviously ಇಂತಹ ಉದಾಹರಣೆಗಳನ್ನು ಕೊಡ್ತಾ ಇದ್ದಾರೆ.
ಆದರೆ ದೇಶದ ಎಲ್ಲಾ ಕಡೆ ಕೊಂಡಾಡಲ್ಪಟ್ಟ ಚಿತ್ರವನ್ನು ಕರಾವಳಿ ಕರ್ನಾಟದಲ್ಲಿ ಬಹಳಷ್ಟು ಜನ ವಿರೋಧ ಮಾಡಲು ಕಾರಣ ಏನು??
ಮೊದಲನೆಯದಾಗಿ ಕರಾವಳಿ ಕರ್ನಾಟಕ ಪ್ರದೇಶದಲ್ಲಿ ದೇವರಿಗೆ ಎಷ್ಟು ಪ್ರಾಮುಖ್ಯತೆ ಇದೆಯೋ ದೈವಕ್ಕೆ ಕೂಡ ಅಷ್ಟೇ ಪ್ರಾಶಸ್ತ್ಯವಿದೆ, ತುಸು ಹೆಚ್ಚು ಇದೆ ಅಂದ್ರು ತಪ್ಪೇನಾಗಲ್ಲ.
ತುಳುವರು ಸಂಭೋದಿಸುವ ಸಂದರ್ಭದಲ್ಲಿ ಕೂಡ ದೈವ-ದೇವರು ಅನ್ನುತ್ತಾರೆಯೇ ಹೊರತು ದೇವರು ದೈವ ಅನ್ನಲ್ಲ, ಇದು ತುಳುನಾಡಿನಲ್ಲಿ ದೈವಕ್ಕೆ ಇರುವ ಮಹತ್ವ ಎಂತದ್ದು, ಯಾವ ರೀತಿಯಲ್ಲಿ ಜನರ ಭಾವನೆಯಲ್ಲಿ ಹಾಸುಹೊಕ್ಕಾಗಿದೆ ಎಂದು ಅರ್ಥೈಸಿಕೊಳ್ಳಬಹುದು.
ನಿಮ್ಮ ಗಮನಕ್ಕಿರಲಿ, ದೈವದ ವೇಷ ಭೂಷಣ ಹಾಕಿಕೊಳ್ಳುವುದು ಒತ್ತಟ್ಟಿಗಿರಲಿ, ಹೆಸರು ಎತ್ತೋದಿಕ್ಕೆ ಹೆದರುವ ಸ್ಥಿತಿ ಇದ್ದಿತ್ತು, ಈಗಲೂ ಆ ಭಯ ಇಲ್ಲ ಅನ್ನಕ್ಕಾಗಲ್ಲ , ಎಲ್ಲರೂ ದೇವರನ್ನು ಭಕ್ತಿಯಿಂದ ಕಾಣುತ್ತೆವೆ, ಆದ್ರೆ ದೈವದ ಮೇಲೆ ತುಳುನಾಡು ಭಾಗದ ಜನರಿಗೆ ಇರುವುದು "ಭಯ-ಭಕ್ತಿ".
ಹಾಗಂತ ಹೆಸರು ಕೇಳಿದ್ರೆ ಮೈಲು ದೂರ ಓಡಿ ಹೋಗ್ತಾರೆ ಅನ್ನೋದೂ ಅರ್ಥವಲ್ಲ, ದೈವಗಳಿಗೆ ಅವನು/ಅವಳು ಎಂದು ಕರೆಯುವಷ್ಟು ಪ್ರೀತಿ ಹೊಂದಿರುವ ಹಿರಿಯರನ್ನು ಇಂದಿಗೂ ನಾವು ಕಾಣ್ತೇವೆ, ಕೆಲವು ದೈವದ ಹೆಸರುಗಳನ್ನು ಎತ್ತಿದರೆ ಮೈ ರೋಮಗಳು ಸೆಟದು ನಿಲ್ಲುವುದು, ಕರಾವಳಿ ಕರ್ನಾಟದ ಜನ ದೈವದ ಬಗ್ಗೆ ಎಂತಹ ಪವಿತ್ರ ಭಾವನೆ ಹೊಂದಿದ್ದಾರೆ ಅನ್ನೋದು ಎಲ್ಲರಿಗೂ ಊಹೆ ಆಗುವಂತದ್ದು.
ಪ್ರತೀ ದೈವಗಳಿಗೂ ಅದರ ಪೋಷಾಕು ಧರಿಸಿ, ತಲೆಗೆ ಕಟ್ಟುವ ಪದ್ದೆಯಿ (ಕಿರೀಟ ಅಂತ ನೀವೇನು ಅಂದುಕೊಳ್ತೀರಿ ನೋಡಿ ಅದು ), ಕೈಲಿ ಹಿಡಿಯುವ ಖಡ್ಸಲೇ, ಮುಖಕ್ಕೆ ಹಚ್ಚುವ ಉರುಂದಲ ಇವೆಲ್ಲ ಧಾರಣೆ ಮಾಡಿ ಗಗ್ಗರ ಸೇವೆ ಕೊಡುವ ಪಂಗಡವೇ ಬೇರೆ ಇದೆ (ನೀವೇನು ಆ ವೇಷ ಧರಿಸಿ ಕುಣಿಯುವುದು ನೋಡ್ತಿರಿ ನೋಡಿ ಅದು ಸಾಮಾನ್ಯ ಅಲ್ಲ, ಅಥವಾ ಅದು ಕುಣಿತವು ಅಲ್ಲ ಅದಕ್ಕೆ ವಿಶೇಷವಾಗಿ ಗಗ್ಗರ ಸೇವೆ ಎಂದೇ ವ್ಯಾಖ್ಯಾನ ಮಾಡ್ತೇವೆ) , ಅವರು ಅದರ ಚಾಕಿರಿಯನ್ನು ಅತ್ಯಂತ ಜತನದಿಂದ ಮಾಡಿಕೊಂಡು ಬರ್ತಿದ್ದಾರೆ.
ತಲೆ ಮೇಲಿಂದ ಕಾಲಬುಡದ ವರೆಗೆ ತೊಡುವ ಪ್ರತೀ ವಿಷಯಕ್ಕೆ ಕೂಡ ಅದರದೇ ಆದ ಮಹತ್ವ ಇದೆ, ಪ್ರತಿಯೊಂದನ್ನು ತೊಡುವ ಮುನ್ನ ವಿಶಿಷ್ಟವಾದ ಪುನಸ್ಕಾರಗಳನ್ನು ಮಾಡಿ, ಅಪ್ಪಣೆ ಪಡೆದ ನಂತರವೇ ಅವುಗಳನ್ನು ತೊಡುವುದು.
ಇಲ್ಲಿ ವಿರೋಧ ಅನ್ನೋದು ಅವಿರ್ಭವ ಆಗಿರೋದು ಯಾವುದೊ ಸಿನೆಮಾ ಬಂದು ದುಡ್ಡು ಮಾಡ್ತಾ ಇದೆ ಅಂತಲ್ಲ, ನಮ್ಮ ಭಾವನೆ, ನಮ್ಮ ಸಂಸ್ಕೃತಿ ಸಿನೆಮದ ಮೂಲಕ ಎಲ್ಲಾ ಕಡೆ ಹರಡಿರುವುದನ್ನು ಜನ ವರ್ಜ್ಯ ಮಾಡ್ಕೋತ ಇಲ್ಲ ಅನ್ನೋದು ಅದರರ್ಥ ಅಲ್ಲ.
ಇಷ್ಟೊಂದು ಜತನದಿಂದ ಮಾಡಿಕೊಂಡು ಬಂದ ಆಚರಣೆಯನ್ನು ಚಪ್ಪರ ಹಾಕಿ ಸಗಣಿ ಸಾರಿಸಿ ವಿವಿಧ rule and regulation, rituals ಮೂಲಕ ಅದರದ್ದೇ ಆದ ಜಾಗದಲ್ಲಿ ಮಾಡ್ತಿದ್ದ ಒಂದು ಭಯಭಕ್ತಿ ಮಿಶ್ರಿತ ಸಂಸ್ಕೃತಿಯ ಆಚರಣೆಯನ್ನು ಯಾವುದೇ ರೀತಿಯ ಕಟ್ಟು ಪಾಡು ಇಲ್ಲದೆ, ಶುದ್ಧಚಾರ ಇಲ್ಲದೆ ಕಾಲಿಗೆ ಗೆಜ್ಜೆ ಹಾಕಿ ( ಗಗ್ಗರ ಕಟ್ಟುವುದು ಕಾಲಿಗೆ, ಅದರ ಮುನ್ನ ಬಹಳ ಕಟ್ಟುಪಾಡು ಇದೆ ಅವೆಲ್ಲ ಆದ ನಂತರವಷ್ಟೇ ಗಗ್ಗರವನ್ನು ದೈವನರ್ತಕ ಕಾಲಿಗೆ ಕಟ್ಟುತ್ತಾರೆ ) ಮುಖಕ್ಕೆ ಬಣ್ಣ ಹಾಕಿ, ಕೈಲಿ ತಲವಾರ ಹಿಡಿದು, ಯಾವುದೋ ಹೋಲಿಕೆ ಆಗುವ ಬಟ್ಟೆ ಹಾಕಿ, ತಲೆಗೆ ವಿಚಿತ್ರ ಕಿರೀಟ ಹಾಕಿ ತಿಯೇಟರ್ ಮದ್ಯೆ ಕುಣಿದಾಗ,
ಕಷ್ಟ ಅಂತ ಅಂದಾಗ ಸಾವಿರದಲ್ಲಿ ಒಂದು ಬಾರಿ ಮಾತ್ರ ನಿಟ್ಟುಸಿರಿನಲ್ಲಿ ದೈವದ ಹೆಸರನ್ನು ಉಸುರುವ ಜನರ ನಂಬಿಕೆಗೆ, ಭಾವನೆಗೆ ದಕ್ಕೆ ಆಯ್ತು ಅನ್ನದೆ ಇನ್ನೇನು ಹೇಳ್ತಾರೆ?
ರೋಡಲ್ಲಿ ಆವೇಶ ತೋರ್ಸೋದು, ಚಿತ್ರಮಂದಿರದಲ್ಲಿ ಆವಾಹನೆ ಆದ ರೀತಿ ವರ್ತನೆ, ದೈವದ ಅನುಕರಣೆ ಮಾಡುವ ಕೂಗು, ಇವೆಲ್ಲ ಖಂಡಿತವಾಗಿಯೂ ಸಂಪ್ರದಾಯಸ್ಥ, ದೈವಭಕ್ತ ತುಳುವರ ನಂಬಿಕೆಯ ಮೇಲೆ ಆಗುತ್ತಿರುವ ಬಲವಾದ ಪ್ರಹಾರ.
ಇದೇನು ನಿಲ್ಲಲ್ಲ, ಯಾಕಂದ್ರೆ ಸಿನೆಮಾದಲ್ಲಿ ಮಾಡಿದ್ದಾರೆ, ನಾವು ಮಾಡಿದ್ರೇನು ಅನ್ನುವ ಮನಸ್ಥಿತಿ ಜನರಿಗೆ ಬಂದು ಬಿಟ್ಟಿದೆ, ಆರಾಧನಾ ಪದ್ಧತಿ ಸಿನೆಮಾದಲ್ಲಿ ದೈವವನ್ನು ತೋರಿಸಿದ ನಂತರ ಸಹಜವಾಗಿ ಅದರ ನೈಜ್ಯ ತಿಳುವಳಿಕೆ ಇಲ್ಲದ ಜನರಿಗೆ ಮನೋರಂಜನೆ ಅನ್ನಿಸಿಬಿಟ್ಟಿದೆ.
ಖಂಡಿತವಾಗಿಯೂ ಗಗ್ಗರ ಸೇವೆ ಮನೋರಂಜನೆ ಅಲ್ಲ, ಅದನ್ನು ವರ್ಷಾವಧಿ ನೇಮ, (ನೇಮ ಅಂದ್ರೆ ಕೋಲ, ಕೋಲ ಅಂದ್ರೆ ಗಗ್ಗರ ಸೇವೆ ಎಲ್ಲಾ ಒಂದೇ ಅರ್ಥದಲ್ಲಿ ಇರುವಂತವು) ಹರಕೆಯ ನೇಮ ಈತರ ಮಾಡಿಕೊಂಡು ಬರುವ ಪವಿತ್ರ ಆಚರಣೆ, ಸ್ಟೇಜ್, ಬೀದಿ, ಸ್ಕ್ರೀನಲ್ಲಿ ನೋಡುವ ವಿಚಾರ ಅದಲ್ಲ.
ಜನ ಯಾಕೆ ಈ ಸಿನೆಮಾ ವಿರೋಧ ಮಾಡಿದ್ರು, ಮಾಡ್ತಾ ಇದ್ದಾರೆ ಅನ್ನೋದು ಹೇಳೋದಿಕ್ಕೆ ನಾನು ದೈವದ ಕೊಡಿಯಡಿಯ ವಿವಿಧ ಕಟ್ಟುಪಾಡುಗಳನ್ನು ಎಳ್ಳಷ್ಟೂ ತಿಳಿಸಿಲ್ಲ, ನನ್ನ ತಿಳುವಳಿಕೆ ಇಷ್ಟೇ ಇರೋದು, ಇದನ್ನು ಮೀರಿ ಇರೋದು ಬಹಳಷ್ಟಿವೆ.
ಸಿನೆಮಾ ನೋಡಿ ದೈವವನ್ನು ಅನುಕರಣೆ ಮಾಡುವ ಗೋಜಿಗೆ ಯಾರೂ ಹೋಗಬಾರದು, ದೈವದ ನರ್ತನ ಖಂಡಿತವಾಗಿಯೂ ತಮಾಷೆ, ಮನರಂಜನೆಯ ವಿಚಾರ ಅಲ್ಲ, ಕರಾವಳಿ ಕನ್ನಡಿಗರ ಈ ಪವಿತ್ರ ಸಂಸ್ಕೃತಿಯ ಆಚರಣೆಯನ್ನು ದಯವಿಟ್ಟು ಗೌರವಿಸಿ ಅನ್ನುವುದು ಈ ಲೇಖನದ ಉದ್ದೇಶ.
Credit
Akshaya VP