10/09/2022
'ಮಳೆ ನಿಂತರೂ ನೆರೆ ನಿಲ್ಲುತ್ತಿಲ್ಲ, ಸರ್ಕಾರವಿದ್ದರೂ ಜನರ ಸಂಕಷ್ಟಗಳು ಮುಗಿಯುತ್ತಿಲ್ಲ'
ರಾಜ್ಯದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಮೊದಲೇ ನೀಡಿತ್ತು. ಈ ಸಂಬಂಧ ಮಾಧ್ಯಮಗಳು ಸಹ ನಿರಂತರವಾಗಿ ವರದಿಗಳನ್ನು ಬಿತ್ತರಿಸಿದ್ದವು, ಹೀಗಿದ್ದರೂ ಸರ್ಕಾರ ಮಾತ್ರ ಎಚ್ಚೆತ್ತುಕೊಳ್ಳಲಿಲ್ಲ, ಮುಖ್ಯಮಂತ್ರಿಗಳು, ಮಳೆ ತಂದೊಡ್ಡಬಹುದಾದ ಅನಾಹುತಗಳ ಬಗ್ಗೆ ಮೊದಲೇ ಚರ್ಚಿಸಿ ಉಸ್ತುವಾರಿ ಸಚಿವರು, ಅಧಿಕಾರಿಗಳು, ಶಾಸಕರುಗಳಿಗೆ ಮೊದಲೇ ಜವಾಬ್ದಾರಿಯನ್ನು ಹಂಚಿಕೆ ಮಾಡಿದ್ದರೆ ಜನರು ಹೀಗೆ ಅನ್ನ, ನೀರು, ನೆಲೆ ಇಲ್ಲದೇ ಪರದಾಡಬೇಕಾಗಿರಲಿಲ್ಲ. ತಗ್ಗು ಪ್ರದೇಶಗಳು ಹಾಗೂ ಜೋಪಡಿಗಳಲ್ಲಿ ನೆಲೆಸಿರುವ ಜನರನ್ನು ಮೊದಲೇ ಸ್ಥಳಾಂತರ ಮಾಡಿದ್ದರೆ ಇಷ್ಟೊಂದು ಸಮಸ್ಯೆಗಳು ಆಗುತ್ತಿರಲಿಲ್ಲ.
ಸರ್ಕಾರದ ಬೇಜವಾಬ್ದಾರಿತನದಿಂದಾಗಿ ಸಂತ್ರಸ್ತರು ತೀವ್ರ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಮಳೆ ನಿಂತರೂ ಮನೆ ತುಂಬಿರುವ ನೀರು ಹೊರ ಹೋಗುತ್ತಿಲ್ಲ, ಕೊಳಚೆ ನೀರಿನಲ್ಲಿ ಬದುಕಲೂ ಆಗುತ್ತಿಲ್ಲ, ಅನ್ನ-ನೀರಿಗೂ ಪರದಾಡುವಂತಾಗಿದೆ. ಇನ್ನು ಅನಾರೋಗ್ಯ ಪೀಡಿತರ ಆರೈಕೆ ಮಾಡುವುದಿರಲಿ ಕನಿಷ್ಠ ಔಷಧೋಪಚಾರವನ್ನೂ ಮಾಡಲು ಆಗುತ್ತಿಲ್ಲ. ಮಕ್ಕಳ ರೋಧನೆ ನಿಲ್ಲುತ್ತಿಲ್ಲ, ನೀರಲ್ಲಿ ತೋಯ್ದಿರುವ ಹಾಸಿಗೆ ಬಟ್ಟೆಗಳು, ಮೈ ಕೊರೆಯುವ ಚಳಿ... ಹೀಗೆ ಸಂತ್ರಸ್ತರು ಅನುಭವಿಸುತ್ತಿರುವ ಯಾತನೆಗಳು ಒಂದಲ್ಲ ಎರಡಲ್ಲ. ಕೆಲವರಂತು ಮನೆಗಳನ್ನು ತೊರೆದು ಹೊಟೆಲ್ ಗಳಲ್ಲಿ ರೂಮ್ ಮಾಡಿಕೊಂಡು ಉಳಿಯುವ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ, ಹೋಟೆಲ್ ಗಳು ಪರಿಸ್ಥಿತಿಯ ಲಾಭ ಪಡೆದು ದುಬಾರಿ ಹಣ ವಸೂಲಿ ಮಾಡುತ್ತಿವೆ.
ಇದಾವ ಸಮಸ್ಯೆಗಳು ಕಾಣದಂತೆ ಸರ್ಕಾರದ ಕಣ್ಣುಗಳು ಕುರುಡಾಗಿವೆ. ನೋವು ಆಲಿಸದಂತೆ ಕಿವಿಗಳು ಕಿವುಡಾಗಿವೆ, ಸಹಾಯ ಮಾಡಲಾಗದಂತೆ ಕೈಗಳು ಬಲಹೀನವಾಗಿವೆ, ಒಟ್ಟಾರೆ ಹೇಳುವುದಾರೆ ಇದೊಂದು ಬಲಹೀನ ಸರ್ಕಾರ. ಸರ್ಕಾರಿ ಯೋಜನೆಗಳ ಕಾಮಗಾರಿಯಲ್ಲಿ 50% ಕಮಿಷನ್ ದೋಚುವುದರಲ್ಲಿ ಮಾತ್ರವೇ ಇವರ ಸಾಮರ್ಥ್ಯ ಇಮ್ಮಡಿಯಾಗುತ್ತದೆ.
ಸರ್ಕಾರ ಕೂಡಲೇ ನೆರೆ ಪೀಡಿತ ಪ್ರದೇಶಗಳಲ್ಲಿ ಸಮರೋಪಾದಿಯಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು, ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು, ಕಾಳಜಿ ಕೇಂದ್ರಗಳನ್ನು ತೆರೆಯಬೇಕು, ಅಲ್ಲಿ ಆಹಾರ, ಕುಡಿಯುವ ನೀರು, ವೈದ್ಯಕೀಯ ಸೌಲಭ್ಯ, ಬೆಚ್ಚನೆ ಉಡುಪು-ಹಾಸಿಗೆ, ಶೌಚಾಲಯದ ವ್ಯವಸ್ಥೆ ಮಾಡಬೇಕು. ನೆರೆ ಪರಿಸ್ಥಿತಿ ತಗ್ಗುವವರೆಗೂ ಈ ಸೌಲಭ್ಯ ಮುಂದುವರೆಸಬೇಕು. ಹೋಟೆಲ್‌ಗಳಲ್ಲಿ ಆಶ್ರಯ ಪಡೆಯುತ್ತಿರುವವರಿಂದ ಅಗತ್ಯಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡದಂತೆ ಹೋಟೆಲ್ ಗಳಿಗೆ ತಾಕೀತುಮಾಡಬೇಕು ಎಂದು ಕಾಂಗ್ರೆಸ್ ಪಕ್ಷ ಆಗ್ರಹಿಸುತ್ತದೆ.