18/01/2022
ಜಾತ್ರೆ ಒಂದು ವಿಶೇಷತೆ ಹಲವು
ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಒಂದು ಪಕ್ಷಿನೋಟ
ಭಾರತದ ಧಾರ್ಮಿಕ ಪರಂಪರೆಯಲ್ಲಿ ಜಾತ್ರೆಗಳಿಗೆ ಅದರದೇ ಆದ ವಿಶಿಷ್ಟತೆ ಇದೆ ವೃತ ನಿಯಮ ಉಪಾಸನೆಗಳು ವ್ಯಕ್ತಿಗತವಾಗಿ ಇದ್ದರೆ ಜಾತ್ರೆ ಯಾತ್ರೆಗಳು ಬಹಿರ್ಮುಖವಾಗ ಎಲ್ಲರನ್ನು ಒಳಗೊಳ್ಳುವ ಒಂದು ಆಚರಣೆಗಳಾಗಿವೆ
ಇಂತಹ ಆಚರಣೆಗಳಲ್ಲಿ ಸಮಾಜದ ಆಧ್ಯಾತ್ಮಿಕ ಉನ್ನತಿಗಾಗಿ ಸೇವೆ ಗೈದ ಧಾರ್ಮಿಕ ಪುನರುತ್ಥಾನಕ್ಕಾಗಿ ಸಮರ್ಪಣೆ ಗೊಂಡ ಪುಣ್ಯಪುರುಷರ ಪುಣ್ಯಸ್ಮರಣೋತ್ಸವ ಜಾತ್ರಾ ಮಹೋತ್ಸವ ವಾಗಿ ಆಚರಿಸಿ ಪುಣ್ಯಪುರುಷರನ್ನು ನಮಿಸುವ ಮೂಲಕ ಸಮಾಜದಲ್ಲಿ ಅಂಥವರ ಧನಾತ್ಮಕ ಸ್ಫೂರ್ತಿಎಲ್ಲೆಡೆ ಹರಡಲಿ ಎನ್ನುವುದು ಜಾತ್ರೆ ಯ ಉದ್ದೇಶಗಳಲ್ಲಿ ಒಂದಾಗಿದೆ
ಇಂತಹ ಉದ್ದೇಶಗಳನ್ನು ಇರಿಸಿಕೊಂಡು ಲಕ್ಷಾಂತರ ಜಾತ್ರೆಗಳು ಭಾರತದಲ್ಲಿ ಜರಗುತ್ತಿರುವುದು ಒಂದು ವಿಶ್ವದಾಖಲೆಯೇ ಸರಿ ಇಂತಹ ಜಾತ್ರೆಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ತಮ್ಮ ಸ್ವರೂಪ ವ್ಯಾಪ್ತಿ ಶೈಲಿ ವಿಧಾನ ಮಾರ್ಗಗಳನ್ನು ಬದಲಾವಣೆಗಳನ್ನ ಮಾರ್ಪಡಿಸಿಕೊಂಡು ಆಚರಿಸಿಕೊಳ್ಳುತ್ತಿರುವ ಜಾತ್ರೆಗಳು ಹಲವಾರು ಇವೆ ಇಂತಹ ಹಲವಾರು ಜಾತ್ರೆಗಳಲ್ಲಿ ಕರ್ನಾಟಕದಲ್ಲಿ ಮುಂಚೂಣಿಯಲ್ಲಿರುವ ಜಾತ್ರೆಯೆಂದರೆ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಒಂದಾಗಿದೆ
ಜಾತ್ರೆಯ ಒಂದೊಂದೇ ವಿಶೇಷತೆಗಳನ್ನು ಗಮನಿಸುತ್ತಾ ಹೋದಂತೆ ಪ್ರಾರಂಭದಲ್ಲಿ ಹಿರಿಯ ಸಾಧಕರಿಗೆ ಜಾತ್ರಾ ಮಹೋತ್ಸವದ ಉದ್ಘಾಟನೆ ಭಾಗ್ಯ ಪ್ರತಿವರ್ಷ ಮಹಾರಥೋತ್ಸವದ ಚಾಲನೆಯನ್ನು ವಿಶೇಷವಾಗಿರುವ ಹಿರಿಯ ಸಾಧಕರನ್ನು ಗುರುತಿಸಿ ಆಹ್ವಾನಿಸಿ ಅವರಿಂದ ಮಹಾ ರಥೋತ್ಸವಕ್ಕೆ ಚಾಲನೆ ಮಾಡಿಸುವ ಸಂಪ್ರದಾಯ, ಒಂದು ಮಾದರಿ ಸಂಪ್ರದಾಯ ವೆನಿಸುತ್ತಿದೆ ಈ ನಿಟ್ಟಿನಲ್ಲಿ ಈಗಾಗಲೇ ಅಣ್ಣಾ ಹಜಾರೆ, ಶ್ರೀ ಶ್ರೀ ರವಿಶಂಕರ್ ಗುರೂಜಿ, ಸಾಲುಮರದ ತಿಮ್ಮಕ್ಕ, ಶ್ರೀ ವೀರೇಂದ್ರ ಹೆಗ್ಗಡೆ, ಭಾರತ ರತ್ನ ಶ್ರೀ ಸಿ ಎನ್ ಎನ್ ರಾವ್ ಹಾಗೂ ಇತರ ಹಿರಿಯ ಸಾಧಕರನ್ನು ಕರೆಯಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಗಿದೆ.
ದಾಸೋಹವೆಂಬ ಧನ್ಯತಾಭಾವ ಜಾತ್ರೆ ಪ್ರತಿ ವರ್ಷ ಜನವರಿಯಲ್ಲಿ ಇರುವುದರಿಂದ ರೈತಾಪಿ ಬಂಧುಗಳು ತಾವು ಬೆಳೆದ ಬೆಳೆಯ ಪ್ರಥಮ ಕಾಣಿಕೆಯಂತೆ ದಾಸೋಹಕ್ಕಾಗಿ ಇಂತಿಷ್ಟು ತೆಗೆದು ಆಮೇಲೆ ಮುಂದಿನ ಕಾರ್ಯ ಸಾಗಿಸುವುದು ಈ ಭಾಗದ ವಾಡಿಕೆಯಾಗಿದೆ ಹಾಗೂ ಸುತ್ತಮುತ್ತಲಿನ ದಾಸೋಹಿಗಳು ಕಾಣಿಕೆಯನ್ನು ಶ್ರೀಮಠಕ್ಕೆ ಸಮರ್ಪಿಸುತ್ತಾರೆ ದವಸಧಾನ್ಯಗಳನ್ನು ಜಾತ್ರೆಗೆ ಬರುವ ಲಕ್ಷಾಂತರ ಸದ್ಭಕ್ತರಿಗೆ ಅಚ್ಚುಕಟ್ಟಾದ ದಾಸೋಹದ ಸೇವಾಕಾರ್ಯಗಳನ್ನು ವ್ಯವಸ್ಥೆ ಮಾಡಿ ಒಂದು ತಿಂಗಳವರೆಗೆ ಸಮರ್ಪಿಸುವ ಕಾರ್ಯವನ್ನು ಕೈಗೊಳ್ಳಲಾಗುತ್ತದೆ ಇದರಮದ್ಯದಲ್ಲಿ ತಮಗೆ ಯೋಗ್ಯವಾಗುವಂತಹ ಭೋಜನಗಳನ್ನು ಮಾಡಿಕೊಂಡು ಪ್ರತಿದಿನ ದಾಸೋಹದಲ್ಲಿ ವಿತರಿಸುವ ಪುಣ್ಯದಲ್ಲಿ ಹಲವರು ಭಾಗಿಯಾಗುತ್ತಾರೆ
ನಾಡಿನ ಮೌಲ್ಯ ವಾಗಿರುವ ದಾಸೋಹದಲ್ಲಿ ಭಾಗಿಯಾಗುವ ಸದಾವಕಾಶವನ್ನು ಹಾಗೂ ಶರಣರ ಸಂದೇಶವನ್ನು ಜೀವಂತವಾಗಿರಿಸುವ ಕೈಂಕರ್ಯದಲ್ಲಿ ಮತ್ತು ಹಸಿದವರಿಗೆ ಅನ್ನ ವೆಂಬ ಭಾವದ ಅಭಿವ್ಯಕ್ತಿ ಜಾತ್ರೆಯ ಬಹುದೊಡ್ಡ ಹೆಗ್ಗಳಿಕೆಯಾಗಿದೆ
ಸಂಗೀತ ಸಾಂಸ್ಕೃತಿಕ-ಧಾರ್ಮಿಕ ವೈಭವದ ತ್ರಿವೇಣಿ ಸಂಗಮ ದಂತಿರುವ ಕೈಲಾಸ ಮಂಟಪದ ಕಾರ್ಯಕ್ರಮಗಳು ಮಹಾರಥೋತ್ಸವ ಮುಗಿದ ತಕ್ಷಣವೇ ಕೈಲಾಸ ಮಂಟಪದಲ್ಲಿನ ಕಾರ್ಯಕ್ರಮಗಳನ್ನು ಸಾಕ್ಷೀಕರಿಸುವ ಜನತೆ ನಿಸರ್ಗದತ್ತ ಭವ್ಯ ವೇದಿಕೆಯಾಗಿರುವ ಮಂಟಪದಲ್ಲಿ ಪೂಜ್ಯರು ಸಾಧಕರು ಸಂಗೀತಗಾರರು ಸಾಂಸ್ಕೃತಿಕ ರಾಯಭಾರಿಗಳಿಗೆ ಮಾತ್ರ ಆಸನದ ವ್ಯವಸ್ಥೆ ಇರುತ್ತದೆ ಲಕ್ಷಾಂತರ ವೀಕ್ಷಕರಿಗೆ ಆಸನದ ವ್ಯವಸ್ಥೆ ಎಂದರೆ ವಿಶಾಲವಾಗಿ ಹರಡಿಕೊಂಡಿರುವ ಹೆಬ್ಬಂಡೆ ಯಾಗಿದೆ.ನಿಸರ್ಗ ನಿರ್ಮಿತ ಪರಿಸರದಲ್ಲಿ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದ ಸಂಗೀತಗಾರರ ಸಂಗಮ ಒಂದೆಡೆಯಾದರೆ ಸಾಂಸ್ಕೃತಿಕ ವೈಭವ ಇನ್ನೊಂದೆಡೆ ಪೂಜ್ಯರ ಅನುಭವದ ನುಡಿ ಗಳು
ಇಂತಹ ಅಪೂರ್ವ ತ್ರಿವೇಣಿ ಸಂಗಮದ ಕಾರ್ಯಕ್ರಮಗಳಿಗೆ ಮನಸೋಲದವರೇ ಇಲ್ಲ.
ಸಾಧಕರಿಗೊಂದು ಸೆಲ್ಯೂಟ್ ಕಾರ್ಯಕ್ರಮ
ಕಳೆದ ಐದು ವರ್ಷಗಳಿಂದ ಸಮಾಜದಲ್ಲಿ ಎಲೆಮರೆಯ ಕಾಯಿಯಾಗಿ ಇದ್ದುಕೊಂಡು ವಿಶೇಷ ಸಾಧನೆಗೈದ ಶ್ರೀಸಾಮಾನ್ಯರನ್ನು ಗುರುತಿಸಿ ಪ್ರತಿದಿನ ಇಬ್ಬರು ಸಾಧಕರನ್ನು ಲಕ್ಷಾಂತರ ಜನ ಸೇರಿರುವ ಹಾಗೂ ಪೂಜ್ಯರ ಸನ್ನಿಧಿಯಲ್ಲಿ ಗುರುತಿಸಿ ಗೌರವಿಸುವ ಸಂಪ್ರದಾಯ ಪ್ರಾರಂಭಿಸಲಾಗಿದೆ.
ಈ ಸಂಪ್ರದಾಯ ಹಲವಾರು ಯುವಕ-ಯುವತಿಯರಿಗೆ ಸಾಧನೆ ಮಾಡಲು ಇನ್ನಷ್ಟು ಸ್ಪೂರ್ತಿ ನೀಡುತ್ತಿರುವುದು ವಿಶೇಷವೆನಿಸುತ್ತದೆ
ತಮ್ಮ ಗುರುವರ್ಯರ ಸಂಪ್ರದಾಯವನ್ನು ಪಾಲಿಸುತ್ತಿರುವ ಬಳಗಾನೂರು ಶಿವಶರಣರು ಜಾತ್ರೆಯ ಮರುದಿನ ಶ್ರೀಮಠದ ಹೆಬ್ಬಾಗಿಲಿನಿಂದ ಗುರುವರ್ಯರ ಗದ್ದುಗೆಗೆ ಭಕ್ತಿಭಾವದಿಂದ ದೀರ್ಘದಂಡ ನಮಸ್ಕಾರ ಹಾಕುವ ಕಾರ್ಯಕ್ರಮ ಜಾತ್ರೆಯ ವಿಶೇಷ ಧಾರ್ಮಿಕ ಕಾರ್ಯಕ್ರಮವಾಗಿದೆ. ಶ್ರೀಗಳೊಂದಿಗೆ ಸಾವಿರಾರು ಭಕ್ತರು ನಮಸ್ಕಾರದಲ್ಲಿ ಭಾಗವಹಿಸುವ ಸಂಕಲ್ಪ ಗಳನ್ನು ಮಾಡುವ ಹಾಗೂ ಪ್ರಣಾಮಗಳನ್ನು ಸಮರ್ಪಿಸುವ ಭಾವಾ ನಾತ್ಮಕ ಕಾರ್ಯಕ್ರಮವಾಗಿದೆ.
ಶ್ರೀಮಠದ ಆವರಣದಲ್ಲಿ ನ ಕೆರೆಯನ್ನು ಆಧುನೀಕರಣ ಸೌಂದರೀಕರಣ ಗೊಳಿಸಿದ ನಂತರ ಕೆರೆಯಲ್ಲಿ ತೆಪ್ಪೋತ್ಸವ ನಡೆಸುವ ಹೊಸ ಉತ್ಸವಕ್ಕೆ ಚಾಲನೆ ನೀಡಲಾಗಿದೆ. ಸರ್ವಾಲಂಕಾರ ಭೂಷಿತ ಶ್ರೀ ಗವಿಸಿದ್ದೇಶ್ವರ ಮೂರ್ತಿಯನ್ನು ಅಲಂಕೃತವಾದ ಮಂಟಪದಲ್ಲಿ ಪ್ರತಿಷ್ಠಾಪಿಸಿಕೊಂಡು ಕೆರೆಯಲ್ಲಿ 5 ಸುತ್ತುಗಳನ್ನು ಹಾಕುವ ವಿಶೇಷ ಉತ್ಸವ ಇದಾಗಿದೆ ಇತ್ತೀಚಿನ ದಿನಗಳಲ್ಲಿ ಮಹಾರಥೋತ್ಸವದ ಮುಂಚಿನ ಕಾರ್ಯಕ್ರಮಗಳಲ್ಲಿ ಹೆಚ್ಚು ಜನರಿಂದ ಆಕರ್ಷಣೆಗೆ ಒಳಪಡುತ್ತಿರುವ ಉತ್ಸವ ಇದಾಗಿದೆ
ಜಾತ್ರೆ ಕೇವಲ ಧಾರ್ಮಿಕ ಆಚರಣೆ ಅಷ್ಟೇ ಆಗದೆ ಶ್ರೀಮಠದ ವಿಶಾಲ ಆವರಣದ ಸ್ಥಳದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ
ನಿಸರ್ಗದತ್ತ ಬೆಟ್ಟ-ಗುಡ್ಡಗಳ ಶಿಲಾಮಂಟಪದ ಮಂಟಪಗಳನ್ನು ಹೊಂದಿರುವ ಶ್ರೀಮಠದ ಆವರಣದಲ್ಲಿನ ಪ್ರಮುಖ ಸ್ಥಳಗಳಿಗೆ ಆಕರ್ಷಕ ದೀಪಾಲಂಕಾರ ಸಂಜೆಯಾಗುತ್ತಿದ್ದಂತೆ ಜಾತ್ರೆಗೆ ಹೊಸ ಕಳೆಯನ್ನು ತಂದುಕೊಡುತ್ತದೆ
ಜಾತ್ರೆಯ ಪ್ರತಿ ಕ್ಷಣಗಳನ್ನು ಸಾಕ್ಷಿ ಕರಿಸಲು ಜಾತ್ರೆಗೆ ಬಂದಂತಹ ಭಕ್ತರಿಗೆ ಅನುಕೂಲವಾಗಲೆಂದು ಸುಮಾರು ಹತ್ತು ಸಾವಿರಕ್ಕಿಂತ ಹೆಚ್ಚು ವಸತಿ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ
ಇದರಿಂದ ದೈನಂದಿನ ಚಟುವಟಿಕೆಗಳಿಗೆ ವಿರಾಮ ನೀಡಿ ಜನತೆ ಪೂರ್ಣಪ್ರಮಾಣದಲ್ಲಿ ಜಾತ್ರಯಲ್ಲಿ ಭಾಗವಹಿಸಿ ಆನಂದ ಪಡೆಯುತ್ತಾರೆ
ಜಾತ್ರೆಯ ಪ್ರತಿ ಆಯಾಮಗಳನ್ನು ದೂರದ ವೀಕ್ಷಕರಿಗೆ ತಲುಪಿಸಲು ವಿದ್ಯುನ್ಮಾನ ಮಾಧ್ಯಮದ ತಂತ್ರಗಾರಿಕೆಯನ್ನು ಬಳಸುವುದರೊಂದಿಗೆ ದೂರದ ವೀಕ್ಷಕರಿಗೆ ತಲುಪಿದರೆ ಜಾತ್ರೆಯ ಆಯಕಟ್ಟಿನ ಸ್ಥಳಗಳಲ್ಲಿ ಪ್ರೊಜೆಕ್ಟರ್ ಗಳ ಮೂಲಕ ಕಾರ್ಯಕ್ರಮಗಳನ್ನು ಜನತೆ ವೀಕ್ಷಿಸಬಹುದು.
ಜಾತ್ರೆಯಲ್ಲಿ ಖರೀದಿಯೊಂದಿಗೆ ಮನೋ ರಂಜನ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸುವುದರಿಂದ ಹಲವಾರು ವ್ಯಾಪಾರಸ್ಥರಿಗೆ ಜಾತ್ರೆಯ ಸಂದರ್ಭದಲ್ಲಿ ಬದುಕು ದೊರೆಯುವುದಲ್ಲದೆ ಕುಟುಂಬಸ್ಥರಿಗೆ ತಮ್ಮ ಕುಟುಂಬದವರಿಗೆ ಮನರಂಜನೆಯಲ್ಲಿ ಭಾಗವಹಿಸುವ ಅವಕಾಶ ಸಿಗುತ್ತದೆ
ಜಾತ್ರೆಗಳು ಕೇವಲ ಒಂದೆರಡು ದಿನಗಳ ಧಾರ್ಮಿಕ ಆಚರಣೆಗಳಾಗಬಾರದು ಎನ್ನುವ ಉದ್ದೇಶಗಳಿಂದ ಹತ್ತು-ಹಲವಾರು ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಶ್ರೀಮಠ ಮತ್ತೊಂದು ಅಪರೂಪದ ಕಾರ್ಯಕ್ರಮವನ್ನು ಜಾತ್ರೆ ಗಿಂತ ಮುಂಚೆ ಹಮ್ಮಿಕೊಳ್ಳುತ್ತದೆ ಅದುವೇ ವಿದ್ಯಾರ್ಥಿ ಜಾಗೃತಿ ಜಾಥಾ ಸಾಮಾಜಿಕ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿ ಜೀವನದಲ್ಲಿಯೇ ಅರಿವು ಜಾಗೃತಿ ಮೂಡಿಸಬೇಕೆನ್ನುವ ಉದ್ದೇಶದಿಂದ ಪ್ರತಿ ಜಾತ್ರೆಗೆ ಒಂದು ಸಮಸ್ಯೆಯ ಬಗ್ಗೆ ವಿದ್ಯಾರ್ಥಿಗಳ ಗಮನ ಸೆಳೆಯುವ ಜಾಗೃತಿಯನ್ನು ಕೈಗೊಳ್ಳಲಾಗುತ್ತದೆ.ಈಗಾಗಲೇ ರಕ್ತದಾನ ಬಾಲ್ಯವಿವಾಹ ಜಲದೀಕ್ಷ ಕೃಪಾದೃಷ್ಟಿ ಹಲವಾರು ವಿಷಯಗಳ ಮೇಲೆ ಜಾಥಾ ಸಂಘಟಿಸಲಾಗಿದೆ ಇದರಿಂದ ವಿದ್ಯಾರ್ಥಿಗಳ ಭಾಗವಹಿಸುವಿಕೆಯ ದೃಷ್ಟಿಯಿಂದ ಹಾಗೂ ವಿದ್ಯಾರ್ಥಿಗಳ ಮೇಲಾಗುತ್ತಿರುವ ಧನಾತ್ಮಕ ಪ್ರಭಾವದ ದೃಷ್ಟಿಯಿಂದ ರಾಜ್ಯದಲ್ಲಿಯೇ ಜಾಥಾ ವಿಶೇಷವಾಗಿದೆ
ಕಾಲಕ್ಕೆ ತಕ್ಕಂತೆ ಶ್ರೀ ಮಠದ ಜಾತ್ರೆ ತನ್ನ ಆಯಾಮವನ್ನು ಬದಲಾಯಿಸಿಕೊಂಡು ವರ್ಷದಿಂದ ವರ್ಷಕ್ಕೆ ಕಾರ್ಯಕ್ರಮ .ಜನಸಾಗರ. ವೈವಿಧ್ಯತೆ. ಸ್ವಚ್ಛತೆ. ಮುಂತಾದ ಸಂಗತಿಗಳಲ್ಲಿ ಬದಲಾಗುತ್ತಿದೆ
ಜಾತ್ರೆ ಎಂದರೆ ಕೇವಲ ರಥೋತ್ಸವವನ್ನು ಕೇಂದ್ರವಾಗಿರಿಸಿ ಕೊಳ್ಳದೆ ತೆಪ್ಪೋತ್ಸವ ದೀರ್ಘದಂಡ ನಮನ ಗಳಂಥ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಧಕರಿಗೆ ಗೌರವ ಪರಿಸರ ಕಾಳಜಿ ಮತ್ತು ಸಾಮಾಜಿಕ ಕಾರ್ಯಕ್ರಮಗಳ ಸಂಘಟನೆ, ಅಚ್ಚುಕಟ್ಟುತನ, ಆತಿಥ್ಯ, ಶಿಸ್ತು, ಬಹುಮುಖಿ ಚಟುವಟಿಕೆಗಳಿಂದ ಜಾತ್ರೆ ಜನರಿಗೆ ಇನ್ನಷ್ಟು ಹೆಚ್ಚು ಹತ್ತಿರವಾಗುತ್ತಿದೆ.
ಕಳೆದ ದಶಕದಲ್ಲಿ ಜಾತ್ರೆ ಪ್ರತಿ ವಿಷಯದಲ್ಲೂ ತನ್ನದೇ ದಾಖಲೆಗಳ ಗಡಿ ದಾಟುತ್ತಿರುವ ಅದರೊಂದಿಗೆ ಕೊಪ್ಪಳದ ಹಿರಿಮೆ-ಗರಿಮೆಯನ್ನು ಹೆಚ್ಚಿಸುತ್ತಿರುವ ಬಹು ದೊಡ್ಡ ಉತ್ಸವವಾಗಿ ದೆ
ಕೊಪ್ಪಳದ ಅಸ್ಮಿತೆಯನ್ನು ಪ್ರತಿನಿಧಿಸುವ ಜಾತ್ರೆಗೆ ಕೊರೋನಾದ ಕರಿನೆರಳು ಜಾತ್ರೆಯ ಕಳೆಯನ್ನು ಮಸುಕಾಗಿಸಿದೆ
ಇವುಗಳ ಮಧ್ಯದಲ್ಲಿ ಜಾತ್ರೆಯ ಸ್ಪೂರ್ತಿ ನಿರಂತರವಾಗಿರಲಿ ಎನ್ನುವ ಸಂಕೇತದಂತೆ ದತ್ತು ಗ್ರಾಮಗಳ ಅಭಿವೃದ್ಧಿ . ಕೆರೆಗಳ ಅಭಿವೃದ್ಧಿ ಡಿಜಿಟಲ್ ಗ್ರಂಥಾಲಯ ಯೋಜನೆಗಳನ್ನು ರೂಪಿಸಿ ಯಶಸ್ವಿಯಾಗುತ್ತಿರುವದು ಜನ ಮನ್ನಣೆ ಗೆ ಪಾತ್ರವಾಗುತ್ತಿದೆ
ಈ ಎಲ್ಲ ಅಂಶಗಳು ಜಾತ್ರೆಯನ್ನು ವಿಶೇಷವಾಗಿಸಿದೆ. ಧಾರ್ಮಿಕ ಆಚರಣೆಗಳು ಕೇವಲ ಸಂಪ್ರದಾಯಕಷ್ಟೆವಾಗಿಸದೆ ಆಧುನಿಕ ಸ್ಪರ್ಷ ನೀಡಿ ಜಾತ್ರೆಗೆ ಹೊಸ ಭ್ಯಾಷ್ಯೆ ಬರದಿದೆ. ಭಕ್ತರ ಭಕ್ತಿ, ಶ್ರೀಮಠದ ಹಿಂದಿನ ಪರಮಪೂಜ್ಯರ ಆಶೀರ್ವಾದ ಹಾಗೂ ಪ್ರಸ್ತುತ ಪರಮಪೂಜ್ಯ ಶ್ರೀ ಮ ನಿ ಪ್ರ ಜಗದ್ಗುರು ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳ ದಿವ್ಯ ಸಂಕಲ್ಪ ಜಾತ್ರೆಯ ವ್ಯಾಪ್ತಿಯನ್ನು, ವೈಭವವನ್ನು ಇಮ್ಮಡಿಗೊಳಿಸಿದೆ.
ಧಾರ್ಮಿಕ ಉತ್ಸವ ಜನಸೇವಾ ಉತ್ಸವವಾಗಿ ಪರಿವರ್ತನೆಯಾಗಿ ಸಾಕ್ಷಿಯಂತಿಯಂತಿರುವ ಕೊಪ್ಪಳದ ಜಾತ್ರೆ ನಾಡಿನ ಇತಿಹಾಸದಲ್ಲಿ ಹೊಸ
ದಾಖಲೆ ನಿರ್ಮಿಸುವತ್ತ ಸಾಗುತ್ತಿದೆ.
ಶರಣಬಸಪ್ಪ ಚ ಬಿಳಿಯಲಿ
ಶ್ರೀ ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯ ಕೊಪ್ಪಳ