20/02/2023
ಇಂದು ಕನ್ನಡ #ತ್ರಿಪದಿಗಳ ಬ್ರಹ್ಮ ಸರ್ವಜ್ಞ ರ ಜಯಂತಿಯ ಶುಭಾಶಯಗಳು
ಮಾಸೂರು, ಹಿರೇಕೆರೂರ್ ತಾಲ್ಲೂಕು, ಹಾವೇರಿ ಜಿಲ್ಲೆಯ ನಮ್ಮ ಕನ್ನಡನಾಡಿನ ಸರ್ವಸ್ವವನ್ನೂ ಅರಿತವನೇ ಸರ್ವಜ್ಞ!. ಸಂಸ್ಕೃತದ ಎಂತ ಅದ್ಭುತ ಹೆಸರಲ್ಲವೆ.
#ಕನ್ನಡ:ದ ತ್ರಿಪದಿ ಸಾಹಿತ್ಯದ ಬ್ರಹ್ಮ. ಕನ್ನಡದಲ್ಲಿ ತ್ರಿಪದಿಗಳೆಂಬ ಮೂರು ಸಾಲಿನ ವಚನಗಳನ್ನು ೧೦೦೦ ಕ್ಕೂ ಹೆಚ್ಚು ರಚಿಸಿರುವರು.
#ಸರ್ವಜ್ಞ ರ ಜ್ಞಾನ ಎಷ್ಟು ಅಪಾರವಾಗಿತ್ತು ಎಂದು ಈ ಎರಡು ಅರ್ಥಪೂರ್ಣ ತ್ರಿಪದಿಗಳು ಓದಿ ಸಾಕು, ನಂತರ ಸರ್ವಜ್ಞ ರ ತ್ರಿಪದಿಗಳ ಬಗ್ಗೆ ಅನೇಕ ಪುಸ್ತಕಗಳಿವೆ ಕೊಂಡು ಓದಿ.
ಮೂರ್ಖಂಗೆ ಬುದ್ಧಿಯನು ನೂರ್ಕಾಲ ಹೇಳಿದರು
ಗೋರ್ಕಲ್ಲಮೇಲೆ ಮಳೆಗರೆದರೆ ಆಕಲ್ಲು ನೀರುಕುಡಿವುದೆ ಸರ್ವಜ್ಞ?
ಬೆಚ್ಚನೆಯ ಮನೆಯಾಗೆ ವೆಚ್ಚಕ್ಕೆ ಹೊನ್ನಾಗೆ ಇಚ್ಛೆಯನರಿವ ಸತಿಯಾಗೆ ಸ್ವರ್ಗಕ್ಕೆಕಿಚ್ಚು ಹಚ್ಚೆಂದ ಸರ್ವಜ್ಞ
ಸರ್ವಜ್ಞರು ತನ್ನ ಬಗ್ಗೆ ತಾವೆ ಇತಿಹಾಸಕಾರರಿಗೆ ಅನುಕೂಲವಾಗುವಂತೆ ತ್ರಿಪದಿಗಳಿಂದಲೆ ಇತಿಹಾಸ ರಚಿಸಿದ್ದಾರೆ
೧. ಮುನ್ನ ಪೂರ್ವದಲಾನು | ಪನ್ನಗಧರನಾಳು ಎನ್ನಯ ಪೆಸರು ಪುಷ್ಪದತ್ತನು-ಎಂದು ಮನ್ನಿಪರು ನೋಡ ಸರ್ವಜ್ಞ
೨. ಅಂದಿನಾ | ಪುಷ್ಪದತ್ತ || ಬಂದ ವರರುಚಿಯಾಗಿ ಮುಂ ದೇವಸಾಲೆ ಸರ್ವಜ್ಞ - ನೆಂದೆನಿಸಿ ನಿಂದವನು ತಾನೇ ಸರ್ವಜ್ಞ
೩. ಮಕ್ಕಳಿಲ್ಲವು ಎಂದು | ಅಕ್ಕಮಲ್ಲಮ್ಮನು ದುಕ್ಕದಿ ಬಸವ | ಗರಿಪಲ್ಲವ | - ಕಾಶಿಯ ಮುಕ್ಕಣ್ಣಗೆ ಹೋದ ಸರ್ವಜ್ಞ
೪. ಮಾಸನೂರ ಬಸವರಸ | ಕೊಸನಿಶನ ಕೇಳಲು ಕಾಶಿಯೀಶನೊಳು ಪಡೆದ ವರ - ವಧು ನಡುವೆ ಸೂಸಿತೆಂತಲು ಸರ್ವಜ್ಞ
೫. ಗಂಡಾಗಬೇಕೆಂದು | ಪಿ0ಡವ ನುಂಗಲು ಲಂಡೆ ಮಾಳ್ವೆಯೊಳು ಜನಿಸಿ - ಲೋಕದೊಳು ಕಂಡುದನೆ ಪೇಳ್ವೆ ಸರ್ವಜ್ಞ
೬. ಗಡಿಗೆ-ಮಡಕೆಯ ಕೊಂಡು | ಅಡುವಡಾವಿಗೆಯೊಳಗೆ ಬಿಡದೆ ಮಳೆಮೋಡ ಹಿಡಿಯಲವ - ರಿಬ್ಬರಿಗು ತಡೆ ಬಿಡಲಾಯ್ತು ಸರ್ವಜ್ಞ
೭. ಅಂಬಲೂರೊಳಗೆಸೆವ | ಕುಂಬಾರಸಾಲೆಯಲಿ ಇಂದಿನ | ಕಳೆಯ | ಮಾಳಿಯೊಳು - ಬಸವರಸ ನಿಂಬಿಟ್ಟನೆನ್ನ ಸರ್ವಜ್ಞ
೮. ಬಿಂದುವ ಬಿಟ್ಟು ಹೋ | ದಂದು ಬಸುರಾದಳವ ಳಂದದಿಯಷ್ಟಾದಶ ಮಾಸ - ಉದರದಲಿ ನಿಂದು ನಾ ಬೆಳೆದೆ ಸರ್ವಜ್ಞ
೯. ಹೆತ್ತವಳು ಮಾಳಿ ಎನ್ನ | ನೊತ್ತಿ ತೆಗೆದವಳು ಕೇಶಿ ಕತ್ತು ಬೆನ್ನ ಹಿಡಿದವಳು ಕಾಳಿ - ಮೊರಿದೊಳೆನ್ನ ಬತ್ತಲಿರಿಸಿದಳು ಸರ್ವಜ್ಞ
೧೦. ಬೆಳೆದೆನವರಿಂದೆನ್ನ | ಕಳೆಯ ಕಂಡವರೆಲ್ಲ ಮೊಳೆಯಲ್ಲಿ ಸಸಿಯನರಿವಂತೆ - ಮಾಳಿಯ ತಿಳಿದವರರೆಗು ಸರ್ವಜ್ಞ
೧೧. ಗಂಡ ತನ್ನಯದೆಂಬ | ಲಂಡೆ ತನ್ನಯದೆಂಬ ಖಂಡಪರಶುವಿನ ವರಪುತ್ರ - ನಾನು ನೆರೆ ಕಂಡುದನೆ ಪೇಳ್ವೆ ಸರ್ವಜ್ಞ
೧೨. ಮಾಳನು ಮಾಳಿಯು | ಕೊಳ್ ತಿಂದ ಹೆಮ್ಮೆಯಲಿ ಕೇಳೆ ನೀನಾರ ಮಗನೆಂದು - ನಾ ಶಿವನ ಮೇಳದಣುಗೆಂಬೆ ಸರ್ವಜ್ಞ
ಸರ್ವಜ್ಞ ರ ಹೆತ್ತಮ್ಮ ಕುಂಬಾರ ಮಾಳೆ, ಪ್ರೀತಿಯಿಂದ ನಾಮಕರಣ ಮಾಡಿದ ಹೆಸರು -ಪುಷ್ಪದತ್ತ. ಸಾಕು ತಾಯಿ ಮಲ್ಲಕ್ಕ. ತಂದೆ ಬಸವರಸ. ಹಾವೇರಿ ಜಿಲ್ಲೆಯ ಹಿರೇಕೇರೂರು ತಾಲ್ಲೂಕು ಮಾಸೂರಿನಲ್ಲಿ ವಾಸವಾಗಿದ್ದ ಆರಾಧ್ಯ ಬ್ರಾಹ್ಮಣ, ಬಸವರಸನು, ಎಷ್ಟು ದಿನಗಳಾದರೂ ಮಕ್ಕಳಾಗ ದಿದ್ದಾಗ ಮಲ್ಲಮ್ಮನನ್ನು ಸಮಾಧಾನ ಮಾಡಿ, ಪುತ್ರಸಂತಾನದ ವರ ಪಡೆಯಲು ಕಾಶೀ ಕ್ಷೇತ್ರಕ್ಕೆ ಹೊರಡುತ್ತಾನೆ.
ಭಕ್ತಿಯಿಂದ ಸೇವೆ ಮಾಡಿದ ಬಸವರಸನಿಗೆ ಕಾಶಿ ವಿಶ್ವನಾಥನು ಕನಸಿನಲ್ಲಿ ಪ್ರತ್ಯಕ್ಷನಾಗಿ, 'ನಿನಗೆ ಪುತ್ರಪ್ರಾಪ್ತಿಯಾಗುವುದು. ಹುಟ್ಟುವ ಮಗನು ನನ್ನ ಪ್ರಸಾದದಿಂದ ಮಹಾಜ್ಞಾನಿಯಾಗುವನು' ಎಂದು ಹೇಳಲು ಆನಂದಭರಿತನಾದ ಬಸವರಸನು, ಪ್ರಾತಃಕಾಲದಲ್ಲಿ ಎದ್ದು, ಪವಿತ್ರ ಗಂಗಾಸ್ನಾನ ಮಾಡಿ, ವಿಶ್ವನಾಥನನ್ನು ಅರ್ಚಿಸಿ, ಪ್ರಸಾದಗಳೊಂದಿಗೆ ತನ್ನ ಗ್ರಾಮದ ಹಾದಿ ಹಿಡಿದನು.
ಹಗಲಿರುಳು ಪ್ರಯಾಣ ಮಾಡಿ ಅನೇಕ ಗ್ರಾಮಗಳಲ್ಲಿ ವಿಶ್ರಮಿಸಿ, ದಾರಿಯಲ್ಲಿ ಸಿಕ್ಕ 'ಅಂಬಲೂರ' ( ಮಾಸೂರು)ಎಂಬ ಗ್ರಾಮಕ್ಕೆ ಬರುವಾಗ ಭಯಂಕರ ಗುಡುಗು, ಸಿಡಿಲುಗಳಿಂದ ಮಳೆ ಸುರಿಯುತ್ತಿತ್ತು. ಸಮೀಪದಲ್ಲಿದ್ದ ಕುಂಬಾರಸಾಲೆಯಲ್ಲಿ ಕುಂಬಾರ ಮಾಳಿ ಎಂಬುವಳ ಮನೆಯಲ್ಲಿ ವಸತಿ ಮಾಡಿದನು.ನಂತರ ಆಕೆಯ ಅತಿಥಿ ಸರ್ಕಾರಕ್ಕೆ ಮನಸೋತು ಕುಂಬಾರ ಮಾಳಿಯನ್ನೆ ವಿವಾಹವಾದರು.
ಕಾಶಿಯಿಂದ ತಂದ ತೀರ್ಥ ಪ್ರಸಾದಗಳನ್ನು ನೀಡಿ, ೯ ತಿಂಗಳ ನಂತರ ಮಾಳಿ ದಿವ್ಯ ತೇಜಸ್ಸಿನ ಗಂಡು ಕೂಸಿಗೆ ಜನ್ಮವಿತ್ತಳು. 'ಪುಷ್ಪದತ್ತ'ನೆಂದು ನಾಮಕರಣವೂ ಆಯಿತು. ಮುಂದೆ ಈ ಮಗುವೇ ಜಗತ್ತಿಗೆ ಸರ್ವಜ್ಞನೆಂದು ಪ್ರಸಿದ್ಧಿಯಾದನು. ಬಾಲ್ಯದಲ್ಲಿಯೆ ಅಗಾಧವಾದ ಪಾಂಡಿತ್ಯವನ್ನು ಶಿವನ ವರಪ್ರಸಾದದಿಂದ ಪಡೆದಿದ್ದನು.
ತಂದೆ ತಾಯಿಗಳಿಂದ ಅಗಲಿ ಪುಣ್ಯಕ್ಷೇತ್ರಗಳನ್ನೂ ಗುರುಮಠಗಳನ್ನೂ ಭೇಟಿ ಮಾಡಿ ಜ್ಞಾನಾರ್ಜನೆ ಮಾಡಿದನು. ಎಲ್ಲಾ ಶಾಸ್ತ್ರಗಳ ಜ್ಞಾನವನ್ನು ಸಂಪಾದಿಸಿದನು. ಅವನ ಜನಪ್ರಿಯ ವಚನಗಳು ಅವನ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಒದಗಿಸಿವೆ. ಅವನು ರಚಿಸಿದ ತ್ರಿಪದಿಗಳಿಗೆ ಲೆಕ್ಕವಿಲ್ಲ. ಅವನು ಆಶುಕವಿಯಾದ್ದರಿಂದ, ಎಷ್ಟೋ ಕವನಗಳು ಅವನ ಸ್ಮೃತಿಯಲ್ಲೇ ಉಳಿದಿರಬಹುದು. ಸುಮಾರು ೭,೦೭೦ ವಚನಗಳು ಲಭ್ಯವಾಗಿದೆಯೆಂದು ತಜ್ಞರ ಅಭಿಪ್ರಾಯ.
ಒಟ್ಟು ಸುಮಾರು ೧,೦೦೦ ತ್ರಿಪದಿಗಳು ಸರ್ವಜ್ಞನ ಹೆಸರಿನಲ್ಲಿ ದಾಖಲಾಗಿವೆ. ಸರ್ವಜ್ಞನ ತ್ರಿಪದಿಗಳು ತಮ್ಮ ಸರಳತೆ ಮತ್ತು ಪ್ರಾಸಬದ್ಧತೆಯಿಂದ ಜನಪ್ರಿಯವಾಗಿವೆ. ಈ ತ್ರಿಪದಿಗಳು ಮುಖ್ಯವಾಗಿ ನೈತಿಕ, ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳನ್ನು ಕುರಿತವು. ಹಲವು ಒಗಟುಗಳು ಸಹ ಸರ್ವಜ್ಞನ ತ್ರಿಪದಿಗಳಲ್ಲಿ ಸೇರಿವೆ.
ಸರ್ವಜ್ಞನ ತ್ರಿಪದಿಗಳು ಮತ್ತಷ್ಟು ನಿಮಗಾಗಿ
ಮಾಸೂರ ಬಸವರಸ । ಕೂಸನೀಶನ ಕೇಳೆ।ಕಾಶಿಯ ಅಭವನೊಳು । ಪಡೆದ ವರವದುವೇ ।ಸೂಸಿತೆಂತೆನಲು ಸರ್ವಜ್ಞ ॥
ಸರ್ವಜ್ಞನೆಂಬುವನು ಗರ್ವದಿಂದಾದವನೇ?ಸರ್ವರೊಳು ಒಂದೊಂದು ನುಡಿಗಲಿತುವಿದ್ಯೆಯ ಪರ್ವತವೆ ಆದ ಸರ್ವಜ್ಞ.
ಸಾಲವನು ಕೊಂಬಾಗ ಹಾಲೋಗರುಂಡಂತೆ
ಸಾಲಿಗರು ಕೊಂಡು ಎಳೆವಾಗಕಿಬ್ಬಡಿಯ ಕೀಲು ಮುರಿದಂತೆ ಸರ್ವಜ್ಞ.
ಏಳು ಕೋಟಿಯೆ ಕೋಟಿ, ಏಳು ಲಕ್ಷವೇ ಲಕ್ಷ, ಏಳು ಸಾವಿರದ ಎಪ್ಪತ್ತು ವಚನಗಳ ಹೇಳಿದನು ಕೇಳ ಸರ್ವಜ್ಞ.
ಡಾ. ರಾಜ್ ಕುಮಾರ್ ರವರು ಸರ್ವಜ್ಞರಾಗಿ ನಟಿಸಿದ "ಸರ್ವಜ್ಞಮೂರ್ತಿ" ಎಂಬ ಕನ್ನಡ ಚಲನಚಿತ್ರವು ೧೯೬೫ರಲ್ಲಿ ತೆರೆಕಂಡಿತು.
ನಮ್ಮ ನಾಡಿನ ತ್ರಿಪದಿ ಬ್ರಹ್ಮ #ಸರ್ವಜ್ಞಮೂರ್ತಿ ಯ ಪ್ರತಿಮೆ ನಮ್ಮ ಕೋಲಾರದಲ್ಲೂ ಇದೆಯೆಂಬುದೆ ನಮಗೆ ಹೆಮ್ಮೆ.
ಮತ್ತೊಮ್ಮೆ ಸರ್ವಜ್ಞ ರ ಜಯಂತಿಯ ಶುಭಾಶಯಗಳು ಮತ್ತು ಮತ್ತೆ ಮತ್ತೆ ಕನ್ನಡದ ಮಣ್ಣಲ್ಲಿ ತಮ್ಮಂತ ಮಹಾನ್ ಸಂತರ ಜನ್ಮವಾಗಲಿ.
ಜೈಭುವನೇಶ್ವರಿ
#ಜೈಹಿಂದ್🇮🇳
Source : #ವಂದೇಮಾತರಂ ಸೋಮಶಂಕರ್