25/10/2014
ಕೊಪ್ಪಳ,ಅ.23(ಕರ್ನಾಟಕ ವಾರ್ತೆ): ಗಂಗಾವತಿ ನಗರ ಹಾಗೂ ನಗರಸಭಾ ವ್ಯಾಪ್ತಿಯಲ್ಲಿ ಸುಗಮ ವಾಹನಗಳ ಸಂಚಾರ ಹಾಗೂ ಜನದಟ್ಟಣೆಯ ನಿಯಂತ್ರಣಕ್ಕಾಗಿ ವಾಹನಗಳ ಅನ್‍ಲೋಡಿಂಗ್, ಏಕಮುಖ ರಸ್ತೆ, ವಾಹನಗಳ ಪಾರ್ಕಿಂಗ್ ಸೇರಿದಂತೆ ಹಲವು ಕ್ರಮಗಳಿಗೆ ನೂತನ ವ್ಯವಸ್ಥೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಆದೇಶ ಹೊರಡಿಸಿದ್ದಾರೆ.
ಗಂಗಾವತಿ ನಗರದಲ್ಲಿ ದಿನೇ ದಿನೇ ವಾಹನ ಸಂಚಾರ ಹೆಚ್ಚಾಗುತ್ತಿದ್ದು, ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸಂಚಾರ ಸುವ್ಯವ್ಯವಸ್ಥೆ ಕೈಗೊಳ್ಳಲು ಸಾರ್ವಜನಿಕ ಹಿತ ದೃಷ್ಟಿಯಿಂದ ವಾಹನ ನಿಲುಗಡೆ, ಏಕಮುಖ ರಸ್ತೆ, ಅನ್‍ಲೋಡ್, ಶಬ್ದ ಮಾಲಿನ್ಯ, ಆಟೋರಿಕ್ಷಾ ನಿಲ್ದಾಣ, ವೇಗದ ಮಿತಿ ಹಾಗೂ ವಾಹನ ಪಾರ್ಕಿಂಗ್ ಸಲುವಾಗಿ ಗಂಗಾವತಿ ನಗರದ ವಿವಿಧ ಪ್ರದೇಶಗಳಲ್ಲಿ ನೂತನ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.
ಅನ್‍ಲೋಡಿಂಗ್ : ಗಂಗಾವತಿ ನಗರದಲ್ಲಿ ಭಾರಿ ವಾಹನಗಳು ಪ್ರತಿದಿನ ಮುಂಜಾನೆ 8.30 ಗಂಟೆ ಒಳಗಡೆ. ಮಧ್ಯಾಹ್ನ 2 ಗಂಟೆಯಿಂದ 4 ಗಂಟೆಯವರೆಗೆ ಹಾಗೂ ರಾತ್ರಿ 9 ಗಂಟೆ ನಂತರ ಸಿ.ಬಿ.ಎಸ್. ಸರ್ಕಲ್‍ನಿಂದ-ರಾಯಚೂರು ಸರ್ಕಲ್, ಪವನ್ ಬಾರ್, ಅಗ್ನಿಶಾಮಕ ಠಾಣೆವರೆಗೆ, ಗಾಂಧಿ ಸರ್ಕಲ್‍ದಿಂದ-ಕಂಪ್ಲಿ ಸರ್ಕಲ್, ರಾಜಭವನ ಕ್ರಾಸ್‍ದಿಂದ-ಬಸ್ ನಿಲ್ದಾಣ, ಬಸ್ ನಿಲ್ದಾಣದಿಂದ-ಆನೆಗುಂದಿ ರಸ್ತೆ ಡಾಲ್ಫಿಂನ್ ಕ್ರಾಸ್, ನೀಲಕಂಠೇಶ್ವರ ಸರ್ಕಲ್‍ದಿಂದ-ಕನಕದಾಸ ವೃತ್ತ, ಕನಕದಾಸ ವೃತ್ತದಿಂದ-ಕಂಪ್ಲಿ ಸರ್ಕಲ್, ಮಹಾವೀರ ಸರ್ಕಲ್‍ದಿಂದ-ಓ.ಎಸ್.ಬಿ. ರಸ್ತೆ ಮಾರ್ಗವಾಗಿ ಗಣೇಶ ಸರ್ಕಲ್, ಗಾಂಧಿ ಸರ್ಕಲ್‍ದಿಂದ-ಬಸ್ ನಿಲ್ದಾಣ, ಡೇಲಿ ಮಾರ್ಕೆಟ್ ರಸ್ತೆಯ ವೀರಭದ್ರೇಶ್ವರ ದೇವಸ್ಥಾನ, ವೀರಭದ್ರೇಶ್ವರ ದೇವಸ್ಥಾನದಿಂದ-ಮಹಾವೀರ ಸರ್ಕಲ್, ಬಂಬೂ ಬಜಾರ್‍ದಿಂದ-ಶಿವ ಟಾಕೀಸ್, ಶಿವ ಟಾಕೀಸ್‍ನಿಂದ-ಚರ್ಚ್, ರಾಯಚೂರು ಸರ್ಕಲ್‍ನಿಂದ-ಕಂಪ್ಲಿ ಸರ್ಕಲ್, ಕಂಪ್ಲಿ ಸರ್ಕಲ್‍ದಿಂದ-ಲಕ್ಷ್ಮೀ ರೈಸ್ ಮಿಲ್, ಸಿ.ಬಿ.ಎಸ್. ಸರ್ಕಲ್‍ನಿಂದ-ಗಾಂಧಿ ಸರ್ಕಲ್‍ವರೆಗೆ ವಾಹನಗಳಿಂದ ಅನ್‍ಲೋಡಿಂಗ್ ಮಾಡಿಕೊಳ್ಳಬೇಕು. ಉಳಿದ ಅವಧಿಯಲ್ಲಿ ಅನ್‍ಲೋಡಿಂಗ್ ನಿರ್ಬಂಧಿಸಲಾಗಿದೆ.
ಏಕಮುಖ ರಸ್ತೆ : ಗಾಂಧಿ ನಗರದ ಸಂಚಾರ ಸುಗಮಗೊಳಿಸುವ ಸಲುವಾಗಿ ಮಹಾವೀರ ಸರ್ಕಲ್‍ದಿಂದ ಓ.ಎಸ್.ಬಿ. ರಸ್ತೆ ಮುಖಾಂತರ ಗಣೇಶ ಸರ್ಕಲ್‍ಗೆ ಹೋಗಲು ಏಕಮುಖ ರಸ್ತೆ ಎಂದು ನಿಗದಿಪಡಿಸಿ ಆದೇಶ ಮಾಡಲಾಗಿದೆ.
ಪಾರ್ಕಿಂಗ್ : ದ್ವಿಚಕ್ರ ವಾಹನಗಳಿಗೆ ಗಂಗಾವತಿ ನಗರದ ಮಹಾಂತ್ಮಗಾಂಧಿ ಸಿ.ಬಿ.ಎಸ್.ವರೆಗೆ. ಸಿ.ಬಿ.ಎಸ್. ಸರ್ಕಲ್‍ನಿಂದ ಕನಕಗಿರಿ ರಸ್ತೆಯ ಶ್ರೀನಿವಾಸಗೌಡ ಆಸ್ಪತ್ರೆವರೆಗೆ ಪ್ರತಿದಿನ ಸಮ ದಿನಾಂಕದಂದು ಒಂದು ಕಡೆ ಮತ್ತು ಬೆಸ ದಿನಾಂಕದಂದು ಒಂದು ಕಡೆ ದ್ವಿಚಕ್ರವಾಹನ ಪಾರ್ಕಿಂಗ್ ಮಾಡುವಂತೆ ಸೂಚನೆ ನೀಡಲಾಗಿದೆ. ಮಹಾಂತ್ಮ ಗಾಂಧಿ ಸರ್ಕಲ್‍ನಲ್ಲಿ ನಾಲ್ಕು ಚಕ್ರ ವಾಹನಗಳ ಪಾರ್ಕಿಂಗ್ ಮಾಡಲು ಆದೇಶ ಮಾಡಲಾಗಿದೆ.
ಶಬ್ದ ಮಾಲಿನ್ಯ : ಗಂಗಾವತಿ ಸರ್ಕಾರಿ ಆಸ್ಪತ್ರೆ, ಆನಂದ ನರ್ಸಿಂಗ್ ಹೋಮ್, ಮಲ್ಲನಗೌಡ ಆಸ್ಪತ್ರೆ, ನೀಲಕಂಠೇಶ್ವರ ದೇವಸ್ಥಾನ ಹತ್ತಿರದ ಸರ್ಕಾರಿ ಬಾಲಕೀಯರ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರಾಪರ್ ಶಾಲೆ, ಸರ್ಕಾರಿ ಸಿ.ಪಿ.ಎಸ್.ಶಾಲೆ, ಚಿನಿವಾಲರ ಆಸ್ಪತ್ರೆ ಚರ್ಚ್ ಹತ್ತಿರ, ಹಳೆ ಮತ್ತು ಹೊಸ ತಹಶೀಲ್ದಾರ್ ಕಛೇರಿ ಮುಂದೆ, ನ್ಯಾಯಾಲಯದ ಮುಂದೆ ಈ ಸ್ಥಳಗಳಲ್ಲಿ ವಾಹನ ಚಾಲಕರು ಹಾರ್ನ್ ಹಾಕದಂತೆ ನಿರ್ಬಂಧ ವಿಧಿಸಲಾಗಿದೆ.
ವೇಗದ ಮಿತಿ : ಗಂಗಾವತಿ ನಗರದ ಒಳಗಡೆ 20 ಕಿ.ಮೀ. ವೇಗದೊಳಗೆ ಎಲ್ಲಾ ವಾಹನಗಳು ಚಲಿಸುವಂತೆ ಆದೇಶಿಸಲಾಗಿದೆ. ಗಂಗಾವತಿ ನಗರದ ಹೊರವಲಯದ ನಗರಸಭಾ ವ್ಯಾಪ್ತಿಯಲ್ಲಿ ಎಲ್ಲಾ ವಾಹನಗಳು 40 ಕಿ.ಮೀ. ವೇಗದೊಳಗೆ ಚಲಿಸುವಂತೆ ಜಿಲ್ಲಾಧಿಕಾರಿ ಆರ್.ಆರ್.ಜನ್ನು ಅವರು ಆದೇಶ ಹೊರಡಿಸಿದ್ದಾರೆ. ಈ ವ್ಯವಸ್ಥೆ ಅಕ್ಟೋಬರ್ 16 ರಿಂದ ಜಾರಿಗೆ ತರಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.