DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ ಜಿಲ್ಲೆ

  • Home
  • India
  • Chamarajanagar
  • DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ ಜಿಲ್ಲೆ

DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ ಜಿಲ್ಲೆ Official Handle of Deputy Commissioner & District Magistrate | District Election Officer, Chamarajanagar District, Karnataka State

ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನ ಆಚರಣೆಗೆ ಅಗತ್ಯ ಸಿದ್ದತೆ ಕೈಗೊಳ್ಳಿ : ಜಿಲ್ಲಾಧಿಕಾರಿ ಶ್ರೀರೂಪ [26-05-2026]▪️ ವಿವಿಧ ಇಲಾಖೆಗಳು, ...
29/05/2026

ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನ ಆಚರಣೆಗೆ ಅಗತ್ಯ ಸಿದ್ದತೆ ಕೈಗೊಳ್ಳಿ : ಜಿಲ್ಲಾಧಿಕಾರಿ ಶ್ರೀರೂಪ [26-05-2026]

▪️ ವಿವಿಧ ಇಲಾಖೆಗಳು, ಕಾನೂನು ಸೇವೆಗಳ ಪ್ರಾಧಿಕಾರ, ಸರ್ಕಾರೇತರ ಸಂಸ್ಥೆಗಳು, ಸ್ವಸಹಾಯ ಸಂಘಗಳು, ಕಾರ್ಮಿಕ ಸಂಘಗಳು ಸೇರಿದಂತೆ ಎಲ್ಲರ ಸಹಕಾರದೊಂದಿಗೆ ಜೂನ್ 12ರಂದು ಜಿಲ್ಲೆಯಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಆಚರಣೆ ಕಾರ್ಯಕ್ರಮಕ್ಕೆ ಅಗತ್ಯ ಸಿದ್ದತೆ ಕೈಗೊರ್ಳಳುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಸೂಚನೆ ನೀಡಿದರು.

▪️ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ (ಮೇ.26) ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

▪️ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ದತಿ ವಿರುದ್ದ ಬಲವಾದ ಜನಾಭಿಪ್ರಾಯ ರೂಪುಗೊಳಿಸುವ ದಿಸೆಯಲ್ಲಿ ಶಿಷ್ಠಾಚಾರದನ್ವಯ ಕಾರ್ಯಕ್ರಮ ಆಯೋಜನೆ ಮಾಡಬೇಕು. ಬಾಲಕಾರ್ಮಿಕ ಪದ್ದತಿ ವಿರುದ್ದ ಆಂದೋಲನ ನಡೆಸುತ್ತಿರುವ ಸಂಘ ಸಂಸ್ಥೆಗಳು, ಉದ್ಯೋಗದಾತರ ಸಂಘಗಳು, ಸಾಮಾಜಿಕ ಕಾರ್ಯಕರ್ತರನ್ನು ಆಹ್ವಾನಿಸಬೇಕು ಎಂದರು.

▪️ ಜೂನ್ 12ರಂದು ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರು ಕೆಲಸ ನಿರ್ವಹಿಸುತ್ತಿರುವ ಸ್ಥಳಗಳಲ್ಲಿಯೇ ಒಟ್ಟಾಗಿ ಸೇರಿ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಅಂಗವಾಗಿ ಪ್ರಮಾಣ ವಚನ ಸ್ವೀಕರಿಸಬೇಕು. ಶಾಲಾ, ಕಾಲೇಜುಗಳಲ್ಲಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು, ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಸಹ ಪ್ರಮಾಣ ವಚನ ಸ್ವೀಕರಿಸಲು ನಿರ್ದೇಶನ ನೀಡಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

▪️ ಪ್ರತಿ ಗ್ರಾಮ ಪಂಚಾಯಿತಿಗಲ್ಲಿ ಬಾಲ ಹಾಗೂ ಕಿಶೋರ ಕಾರ್ಮಿಕ ವಿರೋಧಿ ಪದ್ದತಿಯ ಕುರಿತು ಜಾಗೃತಿ ಮೂಡಿಸಬೇಕು. ಶಾಲಾ-ಕಾಲೇಜುಗಳಲ್ಲಿ ಎನ್.ಸಿಸಿ ಹಾಗೂ ಎನ್.ಎಸ್.ಎಸ್ ವಿದ್ಯಾರ್ಥಿಗಳಿಂದ ಅರಿವು ಜಾಥಾ ಏರ್ಪಡಿಸಬೇಕು. ಬಾಲಕಾರ್ಮಿಕ ಪದ್ದತಿ ವಿರೋಧಿ ಕುರಿತು ಘೋಷಣೆಗಳನ್ನು ಮೊಳಗಿಸಬೇಕು. ಬಾಲ ಹಾಗೂ ಕಿಶೋರ ಕಾರ್ಮಿಕ ಮುಕ್ತ ಗ್ರಾಮಗಳನ್ನು ಗುರುತಿಸಿ ಪ್ರಶಸ್ತಿ ಹಾಗೂ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಬೇಕು ಎಂದರು.

▪️ ಬಾಲಕಾರ್ಮಿಕ ವಿರೋಧಿ ದಿನದ ಮಹತ್ವ ಕುರಿತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲೆ, ಪ್ರಬಂಧ, ಚರ್ಚಾ ಸ್ಪರ್ಧೆಗಳನ್ನು ಆಯೋಜಿಸಬೇಕು. ಶಾಲೆಗಳು ಆರಂಭವಾಗುತ್ತಿದ್ದಂತೆಯೇ ಸೂಕ್ತ ದಿನಾಂಕ ನಿಗದಿ ಮಾಡಿ ಸ್ಪರ್ಧೆಗಳನ್ನು ನಡೆಸಬೇಕು. ಬಾಲ ಹಾಗೂ ಕಿಶೋರ ಕಾರ್ಮಿಕ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಕರನ್ನು ಗೌರವಿಸಬೇಕು ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.

▪️ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಈಶ್ವರ, ಜಿಲ್ಲಾ ಕಾರ್ಮಿಕ ಅಧಿಕಾರಿ ರಾಮಚಂದ್ರಯ್ಯ, ಕಾರ್ಮಿಕ ಯೋಜನಾ ಸೊಸೈಟಿಯ ನಿರ್ದೇಶಕರಾದ ಮಹೇಶ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಮುನಿರಾಜು, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಸ್. ಚಿದಂಬರ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವಿಶ್ವನಾಥ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುಳಾ, ಜಂಟಿ ಕೃಷಿ ನಿರ್ದೇಶಕರಾದ ಸುಷ್ಮಾ ಸೇರಿದಂತೆ ವಿವಿಧ ಇಲಾಖೆಗಳ ಸಭೆಯಲ್ಲಿ ಉಪಸ್ಥಿತರಿದ್ದರು.















ಮಕ್ಕಳ ಆಧಾರ್ ಬಯೋಮೆಟ್ರಿಕ್ ನೋಂದಣಿಗೆ ಶಿಬಿರ ಅಯೋಜಿಸಿ : ಜಿಲ್ಲಾಧಿಕಾರಿ ಶ್ರೀರೂಪ ಸೂಚನೆ [26-05-2026]▪️ ಜಿಲ್ಲೆಯಲ್ಲಿರುವ 5 ವರ್ಷದ ಹಾಗೂ 1...
29/05/2026

ಮಕ್ಕಳ ಆಧಾರ್ ಬಯೋಮೆಟ್ರಿಕ್ ನೋಂದಣಿಗೆ ಶಿಬಿರ ಅಯೋಜಿಸಿ : ಜಿಲ್ಲಾಧಿಕಾರಿ ಶ್ರೀರೂಪ ಸೂಚನೆ [26-05-2026]

▪️ ಜಿಲ್ಲೆಯಲ್ಲಿರುವ 5 ವರ್ಷದ ಹಾಗೂ 15 ವರ್ಷದ ನಂತರದ ಮಕ್ಕಳು ಕಡ್ಡಾಯವಾಗಿ ಆಧಾರ್ ಕಾರ್ಡ್‍ಗೆ ಬಯೋಮೆಟ್ರಿಕ್ ನೋಂದಣಿ ಮಾಡಿಸಬೇಕಿದ್ದು, ಇದಕ್ಕಾಗಿ ಶಾಲೆಗಳಲ್ಲಿ ವಿಶೇಷ ಆಂದೋಲನ ಮಾದರಿಯಲ್ಲಿ ಶಿಬಿರಗಳನ್ನು ಆಯೋಜಿಸುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಸೂಚಿಸಿದರು.

▪️ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ (ಮೇ.26) ನಡೆದ ಜಿಲ್ಲಾಮಟ್ಟದ ಆಧಾರ್ ಯೋಜನೆಯ ಮೇಲ್ವಿಚಾರಣೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

▪️ ವಿದ್ಯಾರ್ಥಿಗಳು ಶಾಲಾ ಕಾಲೇಜು, ಶಿಕ್ಷಣ ಸಂಸ್ಥೆಗಳ ಪ್ರವೇಶ, ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಯೋಜನೆ, ವಿದ್ಯಾರ್ಥಿವೇತನ, ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ಇನ್ನೂ ಹಲವು ಉದ್ದೇಶಗಳಿಗೆ ಆಧಾರ್ ಕಾರ್ಡ್ ಅಗತ್ಯವಾಗಿದೆ. 5 ಹಾಗೂ 15ನೇ ವರ್ಷದ ಮಕ್ಕಳ ಆಧಾರ್ ಗೆ ಬಯೋಮೆಟ್ರಿಕ್ ಅಪ್ ಡೇಟ್ ಕಡ್ಡಾಯವಾಗಿದೆ. ಹೀಗಾಗಿ ಶಾಲೆಗಳಲ್ಲಿಯೇ ಈ ಸೌಲಭ್ಯಕ್ಕಾಗಿ ಶಿಬಿರಗಳನ್ನು ಏರ್ಪಾಡು ಮಾಡುವಂತೆ ಜಿಲ್ಲಾಧಿಕಾರಿಯವರು ತಿಳಿಸಿದರು.

▪️ ಮಕ್ಕಳ ಆಧಾರ್ ಅಪ್ ಡೇಟ್ ಪ್ರಕ್ರಿಯೆಯನ್ನು ವಿಶೇಷ ಮಾದರಿಯಲ್ಲಿ ಕೈಗೊಂಡು ಒಂದು ತಿಂಗಳೊಳಗೆ ಪೂರ್ಣಗೊಳಿಸಬೇಕು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದಂತೆ ಶಾಲೆಗಳಲ್ಲಿ ಆಧಾರ್ ಅಪ್ ಡೇಟ್ ಶಿಬಿರಗಳಿಗೆ ದಿನಾಂಕಗಳನ್ನು ನಿಗದಿ ಮಾಡಿ ವ್ಯಾಪಕವಾಗಿ ತಿಳಿವಳಿಕೆ ನೀಡಬೇಕು ಎಂದರು.

▪️ ಮೊಬೈಲ್ ಸಂಖ್ಯೆಗೆ ಆಧಾರ್ ಲಿಂಕ್ ಮಾಡದೆ ಇರುವವರ ಬಗ್ಗೆ ವಿವರ ಪಡೆದ ಜಿಲ್ಲಾಧಿಕಾರಿಗಳು ಈ ಕುರಿತು ತ್ವರಿತ ಗತಿಯಲ್ಲಿ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

▪️ ಎಂ ಆಧಾರ್ ಆಪ್ ನಲ್ಲಿ ಮೊಬೈಲ್ ಮೂಲಕ ಆಧಾರ್ ತಿದ್ದುಪಡಿಗೆ ಅವಕಾಶವಿದ್ದು, ವಿಳಾಸ ತಿದ್ದುಪಡಿಯನ್ನು ಸ್ವತಹ ಮಾಡಿಕೊಳ್ಳಬಹುದು. 10 ವರ್ಷಗಳ ಹಳೆಯ ಆಧಾರ್ ಕಾರ್ಡ್‍ಗಳನ್ನು ಸ್ವತಹ ಲಿಂಕ್ hಣಣಠಿs://mಥಿಚಿಚಿಜhಚಿಚಿಡಿ.uiಜಚಿi.gov.iಟಿ/ಜu/eಟಿ_Iಓ ಮೂಲಕ ನವೀಕರಿಸಿಕೊಳ್ಳಬಹುದು ಎಂದರು.

▪️ ಐಪಿಪಿಬಿ ಯ (ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್) ಹತ್ತಿರದ ಅಂಚೆ ಕಚೇರಿಗಳಲ್ಲಿ ಬಾಲ ಆಧಾರ್, 5 ವರ್ಷದ ಮಕ್ಕಳ ನೊಂದಣಿ ಮತ್ತು ಮೊಬೈಲ್ ತಿದ್ದುಪಡಿಗೆ ಅವಕಾಶವಿದ್ದು, ಸಾರ್ವಜನಿಕರು ಈ ಸೌಲಭ್ಯವನ್ನು ಸಹ ಸದುಪಯೋಗ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.

▪️ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೆಚ್.ಎಸ್. ಬಿಂದ್ಯಾ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಪುಟ್ಟಗೌರಮ್ಮ, ಜಿಲ್ಲಾ ಆಧಾರ್ ಸಮಾಲೋಚಕರಾದ ರಂಗಸ್ವಾಮಿ, ಇ-ಆಡಳಿತ ಜಿಲ್ಲಾ ಸಮಾಲೋಚಕರಾದ ಮಧುಕೇಶ್ ಸಭೆಯಲ್ಲಿ ಉಪಸ್ಥಿತರಿದ್ದರು.

▪️ ಬೆಂಗಳೂರಿನಿಂದ ಆನ್ ಲೈನ್ ಮೂಲಕ ಯುಐಡಿಎಐ ನ ಸಹಾಯಕ ವ್ಯವಸ್ಥಾಪಕರಾದ ಮೊಹಮ್ಮದ್ ಮುಸಾಬ್, ಇ-ಆಡಳಿತದ ರಾಜ್ಯ ಸಮಾಲೋಚಕರಾದ ಪ್ರಭುಸ್ವಾಮಿ ಪಾಲ್ಗೊಂಡರು.














ಮಕ್ಕಳ ಕಲಿಕೆ, ಶೈಕ್ಷಣಿಕ ಸಾಧನೆಗೆ ಶಿಕ್ಷಕರು ಉತ್ತೇಜನ ನೀಡಿ : ಜಿಲ್ಲಾಧಿಕಾರಿ ಶ್ರೀರೂಪ ▪️ಪೋಷಕರಿಗಿಂತ ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಹೆಚ್ಚ...
26/05/2026

ಮಕ್ಕಳ ಕಲಿಕೆ, ಶೈಕ್ಷಣಿಕ ಸಾಧನೆಗೆ ಶಿಕ್ಷಕರು ಉತ್ತೇಜನ ನೀಡಿ : ಜಿಲ್ಲಾಧಿಕಾರಿ ಶ್ರೀರೂಪ

▪️ಪೋಷಕರಿಗಿಂತ ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಪ್ರಭಾವ ಉಂಟು ಮಾಡಬಲ್ಲವರಾಗಿದ್ದು, ಶಾಲಾ ಆರಂಭದಿಂದಲೇ ಮಕ್ಕಳ ಕಲಿಕೆ, ಶೈಕ್ಷಣಿಕ ಸಾಧನೆಗೆ ಶಿಕ್ಷಕರು ಉತ್ತೇಜನ ನೀಡಬೇಕೆಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.

▪️ನಗರದ ವರನಟ ಡಾ. ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾಗೂ ಅಜೀಂ ಪ್ರೇಮ್ ಜಿ ಫೌಂಡೇಶನ್ ಜಿಲ್ಲಾ ಸಂಸ್ಥೆಯ ಸಹಯೋಗದಲ್ಲಿ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಹಾಗೂ ವಾರ್ಷಿಕ ಕಾರ್ಯ ಯೋಜನೆ ಕುರಿತು ಪ್ರೌಢಶಾಲಾ ಮುಖ್ಯಶಿಕ್ಷಕರಿಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

▪️ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿ ಪೋಷಕರಿಗಿಂತ ಶಿಕ್ಷಕರ ಮೇಲೆ ಹೆಚ್ಚಿದೆ. ಶಿಕ್ಷಕರಿಂದ ಪ್ರಭಾವಿತರಾಗುವ ವಿದ್ಯಾರ್ಥಿಗಳನ್ನು ಅಧ್ಯಯನ, ಸಾಧನೆಗೆ ಪ್ರೇರೇಪಿಸಬೇಕು. ಶಾಲಾ ಆರಂಭದಿಂದಲೇ ವಿದ್ಯಾರ್ಥಿಗಳಿಗೆ ಕಲಿಯುವ ಆಸಕ್ತಿ ಉಂಟು ಮಾಡಬೇಕು. ಶೈಕ್ಷಣಿಕ ಸಾಲಿನಲ್ಲಿ ಗುರುತರವಾದ ಪ್ರಗತಿಗೆ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಜಿಲ್ಲಾಧಿಕಾರಿಯವರು ಹೇಳಿದರು.

▪️ಮಕ್ಕಳ ಮನಸ್ಸನ್ನು ಶಿಕ್ಷಕರು ಅರ್ಥ ಮಾಡಿಕೊಳ್ಳಬಲ್ಲರು. ವಿದ್ಯಾರ್ಥಿಗಳು ಸರಿ ದಾರಿಯಲ್ಲಿ ಸಾಗುವ ಬಗ್ಗೆ ಮಾರ್ಗದರ್ಶನ ಮಾಡಬೇಕು. ಮೊಬೈಲ್ ಬಳಕೆಯಿಂದ ವಿದ್ಯಾಭ್ಯಾಸ ಕಲಿಕೆಗೆ ತೊಡಕಾಗಬಾರದು. ಮಕ್ಕಳು ಏಕಾಗ್ರತೆಯಿಂದ ಓದಿನೆಡೆಗೆ ಒಲವು ಹೊಂದಲು ಶಿಕ್ಷಕರು ತಿಳಿವಳಿಕೆ ನೀಡಬೇಕು ಎಂದರು.

▪️ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಕಳೆದ ಬಾರಿಗಿಂತ ಈ ಬಾರಿ ಶೇ. 30ರಷ್ಟು ಹೆಚ್ಚಾಗಿದೆ. ಇದರಲ್ಲಿ ಶಿಕ್ಷಕರ ಪರಿಶ್ರಮ ಇದೆ. ಮುಂಬರುವ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಇನ್ನೂ ಉತ್ತಮ ಸಾಧನೆ ಮಾಡಿ ಚಾಮರಾಜನಗರ ಜಿಲ್ಲೆ ರಾಜ್ಯದಲ್ಲೇ ಮೊದಲ ಐದು ಸ್ಥಾನದೊಳಗೆ ಬರಬೇಕು. ಈ ನಿಟ್ಟಿನಲ್ಲಿ ಆರಂಭದಿಂದಲೇ ಕಾರ್ಯಕ್ರಮ ಯೋಜಿಸಿ ಅನುಷ್ಠಾನಕ್ಕೆ ತರುವಂತೆ ಸಲಹೆ ಮಾಡಿದರು.

▪️ಜಿಲ್ಲೆಯಲ್ಲಿ ಕಳೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 750 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿ ಗೈರು ಹಾಜರಾಗಿದ್ದಾರೆ. ಈ ಬಗ್ಗೆ ಕಾರಣ ತಿಳಿಯಬೇಕಿದೆ. ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದರೆ ಮುಂದಿನ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗಲಿದೆ. ಅನುತ್ತೀರ್ಣ, ಗೈರುಹಾಜರಾಗುವುದು, ಶಾಲೆ ತೊರೆಯುವುದರಿಂದ ದುಡಿಮೆಗೆ ಆಸಕ್ತರಾಗಬಹುದು. ಇದರಿಂದ ಅವರ ಭವಿಷ್ಯವೇ ಮಸುಕಾಗಲಿದೆ. ಇದಕ್ಕೆ ಅವಕಾಶವಾಗದಂತೆ ಶಿಕ್ಷಕರು ಅಧಿಕಾರಿಗಳು ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.

▪️ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಮಾತನಾಡಿ ಜಿಲ್ಲೆಯ ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸಲು ಎಲ್ಲ ಹಂತದಲ್ಲೂ ನಿರಂತರ ಪ್ರಯತ್ನ ಕೈಗೊಳ್ಳಲಾಗಿದೆ. ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಈ ಬಾರಿ ಹೆಚ್ಚಳವಾಗಿದ್ದು, ಶಿಕ್ಷಕರ ಪ್ರಯತ್ನವು ಸಾಕಷ್ಟಿದೆ. ಶಿಕ್ಷಕರು ಆರಂಭದಿಂದಲೇ ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಿ ಸಾಧನೆಗೆ ಮುಂದಾಗಬೇಕು. ನಿಮಗೆ ಅಗತ್ಯವಿರುವ ಸಹಕಾರವನ್ನು ನೀಡಲಾಗುವುದು ಎಂದರು.

▪️ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಚಂದ್ರಪಾಟಿಲ್ ಅವರು ಮಾತನಾಡಿ ಶಿಕ್ಷಕರು ನಿಂತ ನೀರಾಗದೆ ನಿರಂತರವಾಗಿ ಕಲಿಯುತ್ತಿರಬೇಕು. ಮಕ್ಕಳು ಜೀವನದಲ್ಲಿ ಮೇಲೇರಲು ಶಿಕ್ಷಕರು ಮೆಟ್ಟಿಲಾಗಬೇಕು. ನೀವು ಕಾರ್ಯನಿರ್ವಹಿಸುವ ಶಾಲೆಗಳಲ್ಲಿ ತರುವ ಮಹತ್ತರ ಬದಲಾವಣೆ ನಿಮಗೆ ಪ್ರತಿಫಲ, ತೃಪ್ತಿ ತಂದು ಕೊಡಲಿದೆ ಎಂದರು.

▪️ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಚಂದ್ರಪಾಟಿಲ್, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕರಾದ ಕಾಶಿನಾಥ್, ಅಜೀಂ ಪ್ರೇಮ್ ಜಿ ಫೌಂಡೇಶನ್ ಜಿಲ್ಲಾ ಸಂಸ್ಥೆಯ ಸಂಯೋಜಕರಾದ ಸೌಮ್ಯ, ಇತರರು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ ಶ್ರೀರೂಪ ಅವರಿಂದ ವಿಶೇಷಚೇತನರಿಗೆ ಸಾಧನ ಸಲಕರಣೆ ವಿತರಣೆ ▪️ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಲಿಂಕೋ ಸಂಸ್ಥೆ, ಜಿಲ್ಲ...
26/05/2026

ಜಿಲ್ಲಾಧಿಕಾರಿ ಶ್ರೀರೂಪ ಅವರಿಂದ ವಿಶೇಷಚೇತನರಿಗೆ ಸಾಧನ ಸಲಕರಣೆ ವಿತರಣೆ

▪️ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಲಿಂಕೋ ಸಂಸ್ಥೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ವಿಕಲಚೇತನರು ಮತ್ತು ಹಿರಿಯ ನಾಗರಿಕ ಫಲಾನುಭವಿಗಳಿಗೆ ಇಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ಉಚಿತವಾಗಿ ಸಾಧನ ಸಲಕರಣೆಗಳನ್ನು ವಿತರಿಸಿದರು.

▪️ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಆರ್.ವಿ.ವೈ, ಎಡಿಐಪಿ ಯೋಜನೆಯಡಿ ವಿಶೇಷಚೇತನರಿಗೆ ವಿವಿಧ ಸಾಧನ ಸಲಕರಣೆಗಳನ್ನು ಜಿಲ್ಲಾಧಿಕಾರಿ ಶ್ರೀರೂಪ ಅವರು ವಿತರಣೆ ಮಾಡಿದರು.

▪️ಇದಕ್ಕೂ ಮೊದಲು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಶ್ರೀರೂಪ ಅವರು ಜಿಲ್ಲೆಯಲ್ಲಿ ಎರಡನೇ ಬಾರಿಗೆ ದಿವ್ಯಾಂಗರಿಗೆ ಸಾಧನ ಸಲಕರಣೆಗಳನ್ನು ವಿತರಿಸುವ ಅವಕಾಶ ನನಗೆ ಒದಗಿ ಬಂದಿದೆ. ಈ ಹಿಂದೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಿಎಸ್‍ಆರ್ ನೆರವಿನೊಂದಿಗೆ 450 ಫಲಾನುಭವಿಗಳಿಗೆ ಸಾಧನ ಸಲಕರಣೆಗಳನ್ನು ವಿತರಿಸಲಾಗಿದೆ. ಎರಡನೇ ಬಾರಿ ಅಲಿಂಕೊ ಸಂಸ್ಥೆ ವತಿಯಿಂದ ವಿಶೇಷಚೇತನರಿಗೆ ಸಾಧನ ಸಲಕರಣೆಗಳನ್ನ ನೀಡಲಾಗುತ್ತಿದೆ ಎಂದರು.

▪️ಸರ್ಕಾರ ಹಾಗೂ ಇಲಾಖೆಗಳ ಅನುದಾನದಿಂದ ವಿಕಲಚೇತನರಿಗೆ ಬೇಕಾದ ಸಾಧನ ಸಲಕರಣೆಗಳನ್ನು ಪ್ರತಿ ವರ್ಷ ನೀಡುತ್ತಾ ಬರಲಾಗಿದೆ. ಸಿಎಸ್‍ಆರ್ ನೆರವು ಪಡೆದುಕೊಂಡು ಸಹ ಜಿಲ್ಲೆಯಲ್ಲಿ ಸಾಧನ ಸಲಕರಣೆಗಳನ್ನು ವಿತರಿಸಬೇಕಿದೆ. ವಿಶೇಷಚೇತನರಿಗೆ ಅಗತ್ಯವಿರುವ ಎಲ್ಲ ನೆರವು ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿಯವರು ಹೇಳಿದರು.

▪️ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಈ ಹಿಂದೆ ವಿಶೇಷಚೇತನರು ಸುಲಭವಾಗಿ ಪ್ರವೇಶಿಸಲು ರ್ಯಾಂಪ್ ವ್ಯವಸ್ಥೆ ಇರಲಿಲ್ಲ. ಅಂಧ ಫಲಾನುಭವಿಗಳಿಗು ಇಲ್ಲಿಗೆ ಬರಲು ತೊಂದರೆಯಾಗಿತ್ತು. ಇದನ್ನು ಮನಗಂಡು ಸಭಾಂಗಣ ಪ್ರವೇಶಿಸಲು ರ್ಯಾಂಪ್ ಹಾಗೂ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲು ಸೂಚಿಸಿದ್ದೆ. ಇದೀಗ ರ್ಯಾಂಪ್ ಇತರೆ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.

▪️ವಿಶೇಷಚೇತನರೆಲ್ಲರು ಆಧಾರ್ ಕಾರ್ಡ್ ಪಡೆಯಲು ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಂಡಿದೆ. ಬಯೋಮೆಟ್ರಿಕ್, ಕಣ್ಣಿನ ಗುರುತು ಪಡೆಯಲು ಸಾಧ್ಯವಾಗದ ವಿಶೇಷಚೇತನರಿಗು ಪರ್ಯಾಯ ವ್ಯವಸ್ಥೆಗಳ ಮೂಲಕ ಆಧಾರ್ ಕಾರ್ಡ್ ಪಡೆದುಕೊಳ್ಳಲು ಅಗತ್ಯ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.

▪️ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಕೆ. ಸುರೇಶ್, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಡಾ. ಕೆ. ಮಂಜುನಾಥ್, ಅಲಿಂಕೋ ಸಂಸ್ಥೆಯ ಪ್ರತಿನಿಧಿ ಕೃಷ್ಣ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

ಕುಡಿಯುವ ನೀರು ಸಮಸ್ಯೆ ಪರಿಹಾರಕ್ಕೆ ಮುಂಜಾಗ್ರತಾ ಕ್ರಮ ವಹಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ  ವಿನೋತ್ ಪ್ರಿಯಾ ಸೂಚನೆ [25-05-2026]◾...
26/05/2026

ಕುಡಿಯುವ ನೀರು ಸಮಸ್ಯೆ ಪರಿಹಾರಕ್ಕೆ ಮುಂಜಾಗ್ರತಾ ಕ್ರಮ ವಹಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ವಿನೋತ್ ಪ್ರಿಯಾ ಸೂಚನೆ [25-05-2026]

◾ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಅಧಿಕಾರಿಗಳು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ಪಶುಸಂಗೋಪನೆ, ಮೀನುಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿಗಳು ಆಗಿರುವ ಆರ್. ವಿನೋತ್ ಪ್ರಿಯಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

◾ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಹಾಗೂ ಜಿಲ್ಲಾ ಪಂಚಾಯತ್ ಲಿಂಕ್ ಡಾಕುಮೆಂಟ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

◾ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರ, ಉಸ್ತುವಾರಿಗಾಗಿ ನೇಮಕವಾಗಿರುವ ನೋಡಲ್ ಅಧಿಕಾರಿಗಳ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ಪಡೆದ ಉಸ್ತುವಾರಿ ಕಾರ್ಯದರ್ಶಿಗಳು ಕುಡಿಯುವ ನೀರಿನ ಬವಣೆ ನೀಗಿಸಲು ಅಗತ್ಯವಿರುವ ಎಲ್ಲ ಕ್ರಮಗಳಿಗೆ ಮುಂದಾಗಬೇಕು. ಅಗತ್ಯವಿರುವೆಡೆ ಟ್ಯಾಂಕರ್‍ಗಳ ಮೂಲಕ ಕುಡಿಯುವ ನೀರು ಪೂರೈಸಬೇಕು. ಟ್ಯಾಂಕರ್‍ಗಳ ಮೂಲಕ ನೀರು ಸರಬರಾಜು ಮಾಡುವ ವೆಚ್ಚ ವಿವರ ದಾಖಲಿಸಲು ಪಾರದರ್ಶಕ ಕ್ರಮ ಅನುಸರಿಸಬೇಕು. ಸಮರ್ಪಕ ನೀರು ಪೂರೈಕೆ ಖಚಿತಪಡಿಸಿಕೊಂಡ ಬಳಿಕವೇ ಹಣ ಪಾವತಿ ಮಾಡಬೇಕು. ನೋಡೆಲ್ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಸೂಚಿಸಿದರು.

◾ ಚಾಮರಾಜನಗರ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜಿಗಾಗಿ ಟಿ. ನರಸೀಪುರದಿಂದ ಪೂರೈಕೆಯಾಗುತ್ತಿರುವ ಮಾರ್ಗಮಧ್ಯೆ ಕೆಲವು ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಅಡಿ ತ್ವರಿತವಾಗಿ ನೀರು ಒದಗಿಸುವ ಕಾರ್ಯ ಶೀಘ್ರ ಅನುಷ್ಠಾನವಾಗಬೇಕು. ಇದರಿಂದ ಚಾಮರಾಜನಗರ ಪಟ್ಟಣಕ್ಕೆ ನೀರು ಸಮರ್ಪಕವಾಗಿ ಸರಬರಾಜು ಆಗಲು ಸಾಧ್ಯವಾಗಲಿದೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸದಿದ್ದರೆ ಟ್ಯಾಂಕರ್‍ಗಳ ಮೂಲಕ ಪೂರೈಸುವ ನೀರಿನ ವೆಚ್ಚ ಭರಿಸುವಂತೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ನೋಟಿಸ್ ನೀಡಲು ಅಧಿಕಾರಿಗಳಿಗೆ ಉಸ್ತುವಾರಿ ಕಾರ್ಯದರ್ಶಿಗಳು ಸೂಚನೆ ನೀಡಿದರು.

◾ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಹೆಚ್ಚಿನ ಸುಧಾರಣೆಯಾಗಬೇಕು. ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಅನುತ್ತೀರ್ಣತೆ ಇರಬಾರದು. ಫಲಿತಾಂಶದಲ್ಲಿ ಹೆಚ್ಚಳ ಕಾಣಬೇಕು. ಶೇ. 100ರಷ್ಟು ಫಲಿತಾಂಶಕ್ಕಾಗಿ ಕಡಿಮೆ ಫಲಿತಾಂಶ ಬಂದಿರುವ ಶಾಲೆಗಳನ್ನು ಗುರುತಿಸಿ ಕೇಂದ್ರಿಕರಿಸಿ ಹೊಸಹೊಸ ಕಲಿಕಾ ವಿಧಾನಗಳು, ಕಾರ್ಯಾಗಾರಗಳನ್ನು ಆಯೋಜಿಸಬೇಕು. ಶಾಲೆಗಳಲ್ಲಿ ಮಕ್ಕಳ ಪ್ರತಿನಿತ್ಯದ ಹಾಜರಾತಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

◾ ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗುತ್ತಿದ್ದು, ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ಮನೆಗೋಡೆಗಳು ಕುಸಿಯದಂತೆ ಮನೆಯ ಸ್ಥಿತಿಗತಿಗಳನ್ನು ಗಮನಿಸಬೇಕು. ಮಳೆನೀರು ಮನೆಗಳಿಗೆ ನುಗ್ಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಎಲ್ಲಾ ಪಂಚಾಯಿತಿ ಅಧಿಕಾರಿಗಳು ಆಯಾ ಗ್ರಾಮಗಳಲ್ಲಿ ಚರಂಡಿಗಳಲ್ಲಿ ಹೂಳು ತುಂಬಿ ಕಟ್ಟಿಕೊಳ್ಳದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸಮಸ್ಯೆ ಉದ್ಭವಿಸಿದರೆ ಸಂಬಂಧಪಟ್ಟ ತಹಸೀಲ್ದಾರರು ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಎಚ್ಚರಿಕೆ ನೀಡಿದರು.

◾ ಜಿಲ್ಲೆಯ ಮೆಟ್ರಿಕ್ ಪೂರ್ವ ಶಾಲೆಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಬೇಕು. ಹಿಂದುಳಿದ ವರ್ಗಗಳ, ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಸ್ಟಲ್‍ಗಳಲ್ಲಿ ಮಕ್ಕಳ ಗೈರುಹಾಜರಿ ಗಮನಿಸಲಾಗಿದೆ. ಇದರ ಪರಿಹಾರಕ್ಕಾಗಿ ಅಧಿಕಾರಿಗಳು ಕ್ಷೇತ್ರಪ್ರವಾಸ ಕೈಗೊಳ್ಳಬೇಕು. ಮಕ್ಕಳ ಪೋಷಕರಿಗೆ ತಿಳಿವಳಿಕೆ ನೀಡಬೇಕು ಎಂದರು.

◾ ಜಿಲ್ಲಾಮಟ್ಟದ ಅಧಿಕಾರಿಗಳು 2026-27ನೇ ಸಾಲಿನ ಅನುದಾನಕ್ಕಾಗಿ ಕ್ರಿಯಾಯೋಜನೆ ಸಿದ್ದಪಡಿಸಿ ಶೀಘ್ರವಾಗಿ ಸಲ್ಲಿಸಬೇಕು. ಯಾವುದೇ ವಿಳಂಬಕ್ಕೆ, ತಿದ್ದುಪಡಿಗೆ ಅವಕಾಶವಾಗದಂತೆ ಕ್ರಿಯಾಯೋಜನೆ ಪರಿಶೀಲಿಸಿ ಸಿದ್ದಪಡಿಸಬೇಕು. ಏನಾದರೂ ಬದಲಾವಣೆ ಇದ್ದಲ್ಲಿ ಸರಿಪಡಿಸಿ ಜೂನ್ ಮಾಹೆಯ ಅಂತ್ಯದೊಳಗೆ ಸರ್ಕಾರಕ್ಕೆ ಸಲ್ಲಿಸುವಂತೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆರ್. ವಿನೋತ್ ಪ್ರಿಯಾ ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

◾ ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಉಪವಿಭಾಗಧಿಕಾರಿ ದಿನೇಶ್ ಕುಮಾರ್ ಮೀನಾ, ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿರಾಜ್, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಹಾಸ್ಟೆಲ್, ಆಹಾರ ಗೋದಾಮು, ನಿರ್ಮಾಣಗೊಂಡಿರುವ ಕಟ್ಟಡ ಕಾಮಗಾರಿ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಭೇಟಿ : ಪರಿಶೀಲನೆ ▪️ಪಶುಸಂಗೋಪನೆ...
25/05/2026

ಹಾಸ್ಟೆಲ್, ಆಹಾರ ಗೋದಾಮು, ನಿರ್ಮಾಣಗೊಂಡಿರುವ ಕಟ್ಟಡ ಕಾಮಗಾರಿ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಭೇಟಿ : ಪರಿಶೀಲನೆ

▪️ಪಶುಸಂಗೋಪನೆ, ಮೀನುಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಆರ್. ವಿನೋತ್ ಪ್ರಿಯಾ ಅವರು ಇಂದು ಚಾಮರಾಜನಗರ ಪಟ್ಟಣದಲ್ಲಿ ವಿದ್ಯಾರ್ಥಿನಿಲಯ, ಆಹಾರ ನಿಗಮದ ಗೋದಾಮು, ನಿರ್ಮಾಣ ಹಂತದಲ್ಲಿರುವ ಶಾಲೆ, ಹಾಸ್ಟೆಲ್ ಕಾಮಗಾರಿಯನ್ನು ಪರಿಶೀಲಿಸಿದರು.

▪️ನಗರದ ಪ್ರವಾಸಿಮಂದಿರ ಸಮೀಪ ಇರುವ ಕರ್ನಾಟಕ ಆಹಾರ ನಿಗಮದ ಗೋದಾಮಿಗೆ ಭೇಟಿ ನೀಡಿ ದಾಸ್ತಾನು ಮಾಡಲಾಗಿದ್ದ ಅಕ್ಕಿ, ರಾಗಿಯನ್ನು ಪರಿಶೀಲಿಸಿದರು. ಗುಣಮಟ್ಟವಿಲ್ಲದಿದ್ದಲ್ಲಿ ವಾಪಸ್ಸು ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

▪️ಸಮಾಜ ಕಲ್ಯಾಣ ಇಲಾಖೆ ವತಿಯಿಂದ 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡು ಉದ್ಘಾಟನೆಗೆ ಸಿದ್ಧವಾಗಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಕಟ್ಟಡವನ್ನು ವೀಕ್ಷಿಸಿದರು. ಅಡುಗೆ ಮನೆ, ಭೋಜನಾಲಯ, ಅಧ್ಯಯನ ಕೊಠಡಿ, ಶೌಚಾಲಯ, ಸ್ಟೋರ್ ರೂಂ ಸೇರಿದಂತೆ ಮೂಲ ಸೌಲಭ್ಯಗಳ ಕುರಿತು ಮಾಹಿತಿ ಪಡೆದು ಅಗತ್ಯ ಸೂಚನೆಗಳನ್ನು ನೀಡಿದರು.

▪️ಪಟ್ಟಣದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೂಲಸೌಕರ್ಯಗಳನ್ನು ವೀಕ್ಷಿಸಿದರು. ಹೊಸ ಕಟ್ಟಡ ಅವಶ್ಯಕತೆ ಇದ್ದಲ್ಲಿ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.

▪️ಜಾಲಹಳ್ಳಿ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ವಿವೇಕ ಯೋಜನೆಯಡಿ ನಿರ್ಮಾಣವಾಗುತ್ತಿರುವ ಕೊಠಡಿ ಕಾಮಗಾರಿಯನ್ನು ವೀಕ್ಷಿಸಿದರು. ಕಾಮಗಾರಿ ಸಂಬಂಧ ಸಲಹೆ ಸೂಚನೆಗಳನ್ನು ನೀಡಿದರು.

▪️ಜಿಲ್ಲಾಧಿಕಾರಿ ಶ್ರೀರೂಪ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಮುನಿರಾಜು, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೆಚ್.ಎಸ್. ಬಿಂದ್ಯಾ, ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಶೆಟ್ಟಿ, ಇತರೆ ಅಧಿಕಾರಿಗಳು ಇದ್ದರು.

ಜೂನ್ 28ರಂದು ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ : ಅಗತ್ಯ ಸಿದ್ದತೆಗೆ ಜಿಲ್ಲಾಧಿಕಾರಿ ಶ್ರೀರೂಪ ಸೂಚನೆ [21-05-2026]▪️ ಜಿಲ್ಲೆಯಾದ್ಯಂತ ಜೂನ್ 28...
22/05/2026

ಜೂನ್ 28ರಂದು ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ : ಅಗತ್ಯ ಸಿದ್ದತೆಗೆ ಜಿಲ್ಲಾಧಿಕಾರಿ ಶ್ರೀರೂಪ ಸೂಚನೆ [21-05-2026]

▪️ ಜಿಲ್ಲೆಯಾದ್ಯಂತ ಜೂನ್ 28ರಂದು ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದಕ್ಕಾಗಿ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

▪️ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಜಿಲ್ಲಾ ಲಸಿಕಾ ಟಾಸ್ಕ್ ಪೋರ್ಸ್‍ನ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

▪️ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಅಂಗವಾಗಿ ಜೂನ್ 28ರಂದು ಆಗತಾನೆ ಹುಟ್ಟಿದ ಮಗುವಿನಿಂದ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪೋಲಿಯೋ ಲಸಿಕೆ ಹಾಕಲಾಗುತ್ತದೆ. ಈ ಬಾರಿಯ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಜಿಲ್ಲೆಯ 58775 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಪೋಲಿಯೋ ಹನಿಯಿಂದ ಯಾವುದೇ ಮಗು ವಂಚಿತವಾಗದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನೋಡಿಕೊಳ್ಳಬೇಕು. ಕಾರ್ಯಕ್ರಮ ಯಶಸ್ಸಿಗೆ ಆರೋಗ್ಯ ಇಲಾಖೆಗೆ ಎಲ್ಲಾ ಇಲಾಖೆಗಳು ಸಹಕಾರ ನೀಡುವಂತೆ ಜಿಲ್ಲಾಮಟ್ಟದ ಎಲ್ಲಾ ಇಲಾಖಾಧಿಕಾರಿಗಳಿಗೆ ಸೂಚಿಸಿದರು.

▪️ ಜೂನ್ 28ರಂದು ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬೂತ್ ಮಟ್ಟದಲ್ಲಿ ಮಕ್ಕಳಿಗೆ ಲಸಿಕೆ ಹಾಕಲಾಗುವುದು. ಜೂನ್ 29ರಿಂದ 30ರವರೆಗೆ ಗ್ರಾಮೀಣ ಪ್ರದೇಶ ಹಾಗೂ ಜೂನ್ 29ರಿಂದ ಜುಲೈ 1ರವರೆಗೆ ನಗರ ಪ್ರದೇಶದ ಮನೆಮನೆಗಳಿಗೆ ಆರೋಗ್ಯ ಕಾರ್ತಕರ್ತರು ಭೇಟಿ ನೀಡಿ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲಿದ್ದಾರೆ. ನಗರ ಪ್ರದೇಶದಲ್ಲಿ 93 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 519 ಸೇರಿದಂತೆ ಒಟ್ಟು 612 ಬೂತ್ ಗಳನ್ನು ತೆರೆಯಲಾಗುತ್ತದೆ. ಬಸ್, ರೈಲ್ವೆ ನಿಲ್ದಾಣ ಸೇರಿದಂತೆ ಇತರೆ ಜನನಿಬಿಡ ಸ್ಥಳಗಳಲ್ಲಿ 25 ಟ್ರ್ಯಾನ್ಸಿಟ್ ಬೂತ್ ಗಳನ್ನು ತೆರಯಲಾಗುವುದು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

▪️ ಜಿಲ್ಲೆಯ ಎಲ್ಲಾ ಶಾಲೆಗಳು ಹಾಗೂ ಅಂಗನವಾಡಿಗಳಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮದ ಬಗ್ಗೆ ವ್ಯಾಪಕ ಅರಿವು ಮೂಡಿಸಬೇಕು. ಶಾಲೆಗಳಲ್ಲಿ ಪ್ರಾರ್ಥನಾ ಸಮಯದಲ್ಲಿ ಶಿಕ್ಷಕರು ಮಕ್ಕಳಿಗೆ ಪೋಲಿಸಿ ಲಸಿಕೆ ಕುರಿತು ಮಾಹಿತಿ ನೀಡಬೇಕು. ಪ್ರತಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕಾರ್ಯಕ್ರಮಕ್ಕೆ ಅವಶ್ಯ ಸಹಕಾರ ನೀಡಬೇಕು. ಎಲ್ಲಾ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ತಾಲೂಕುಮಟ್ಟದ ಅನುಷ್ಠಾನ ಸಮಿತಿ ರಚಿಸಬೇಕು. ಅಂಗನವಾಡಿ, ಆಶಾ ಹಾಗೂ ಸ್ತ್ರೀಶಕ್ತಿ ಮತ್ತು ಸ್ವಸಹಾಯ ಗುಂಪುಗಳ ಸದಸ್ಯರನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಕಾರ್ಯಕ್ರಮ ಅಚ್ಚುಕಟ್ಟು ನಿರ್ವಹಣೆಗೆ ಮುಂದಾಗುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

▪️ ಜಿಲ್ಲೆಯ ಕ್ವಾರಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳು, ಇತರೆ ರಾಜ್ಯಗಳಿಂದ ವಲಸೆ ಬಂದಿರುವ ಕಾರ್ಮಿಕರ ಮಕ್ಕಳು, ಕಾಡಂಚಿನ ಗ್ರಾಮಗಳ ಹಾಗೂ ಅರಣ್ಯವಾಸಿಗಳ ಮಕ್ಕಳು ಪೋಲಿಯೋ ಹನಿಯಿಂದ ವಂಚಿತರಾಗಬಾರದು. ಇದಕ್ಕಾಗಿ ಈಗಿನಿಂದಲೇ ಪೂರ್ವಸಿದ್ದತಾ ಕಾರ್ಯಗಳನ್ನು ಕೈಗೊಳ್ಳಬೇಕು. ಪೋಲಿಯೋ ಹನಿ ಕಾರ್ಯಕ್ರಮದ 4 ದಿನಗಳ ಕಾಲ ನಿರಂತರ ವಿದ್ಯುತ್ ಸೌಲಭ್ಯ ಒದಗಿಸಬೇಕು. ಬೂತ್‍ಗಳಲ್ಲಿ ಲಸಿಕಾ ಕಾರ್ಯ ನಿರ್ವಹಿಸುವ ಕಾರ್ಯಕರ್ತರಿಗೆ ಅವಶ್ಯ ತರಬೇತಿ ನೀಡಬೇಕು. ಒಟ್ಟಾರೆ ಕಾರ್ಯಕ್ರಮದ ಯಶಸ್ಸಿಗೆ ಜಿಲ್ಲಾ ಎಲ್ಲಾ ನಗರ, ಸ್ಥಳೀಯ ಸಂಸ್ಥೆಗಳು ಹಾಗೂ ಎಲ್ಲಾ ಇಲಾಖೆಗಳ ಸಹಕಾರ ಹಾಗೂ ಸಮನ್ವಯತೆ ಅಗತ್ಯವಾಗಿ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.

▪️ ಇದೇ ವೇಳೆ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ ಅವರು ಭಾರತ ಪೋಲಿಯೋ ಮುಕ್ತ ರಾಷ್ಟ್ರವಾಗಿದ್ದು, ದೇಶದ ಯಾವುದೇ ಭಾಗದಲ್ಲಿ ಪೋಲಿಯೋ ಪ್ರಕರಣ ಕಂಡುಬಂದಿಲ್ಲ. ಆದರೂ ನೆರೆಯ ದೇಶಗಳಾದ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ದೇಶಗಳಲ್ಲಿ ಇನ್ನೂ ಪೋಲಿಯೋ ಪ್ರಕರಣಗಳು ಇರುವುದರಿಂದ ಮುನ್ನೆಚ್ಚರಿಕೆಯಾಗಿ ದೇಶದ್ಯಾಂತ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

▪️ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಖೆ ಉಪನಿರ್ದೇಶಕರಾದ ಸುರೇಶ್, ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು, ಪ್ರಾದೇಶಿಕ ಸಾರಿಗೆ ಅಧಿಕಾರಿ ಗಾಯಿತ್ರಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.









ದಾರಿ ತೋರಿಸುವುದು ದೇವರ ಕೆಲಸ, ಗುರಿ ತಲುಪುವುದು ನಮ್ಮ ಕೆಲಸ : ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ▪️ದೇವರು ಕಷ್ಟ ಕೊಡುತ್ತಾನೆ ಜೊತೆಗೆ...
21/05/2026

ದಾರಿ ತೋರಿಸುವುದು ದೇವರ ಕೆಲಸ, ಗುರಿ ತಲುಪುವುದು ನಮ್ಮ ಕೆಲಸ : ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್

▪️ದೇವರು ಕಷ್ಟ ಕೊಡುತ್ತಾನೆ ಜೊತೆಗೆ ಅದನ್ನು ಎದುರಿಸುವ ಶಕ್ತಿಯನ್ನೂ ನೀಡುತ್ತಾನೆ. ದಾರಿ ತೋರಿಸುವುದು ದೇವರ ಕೆಲಸ, ಗುರಿ ತಲುಪಬೇಕಿರುವುದು ನಮ್ಮ ಕೆಲಸ. ದೇವರು ನೀಡುವ ಅವಕಾಶವನ್ನು ಬಳಸಿಕೊಳ್ಳಬೇಕು. ಅವಕಾಶ ಸಿಕ್ಕಾಗ ಸ್ವಲ್ಪಮಟ್ಟಿಗೆ ದಾನ ಮಾಡಿ ಎಂದು ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಸಲಹೆ ಮಾಡಿದರು.

▪️ಕೊಳ್ಳೇಗಾಲ ತಾಲ್ಲೂಕಿನ ಶ್ರೀ ವರಪುರಂ ಮಧ್ಯರಂಗ ಕ್ಷೇತ್ರದಲ್ಲಿ ಶ್ರೀ ಜಗನ್ಮೋಹನ ರಂಗನಾಥಸ್ವಾಮಿ ದೇವಾಲಯ ಜೀರ್ಣೋದ್ಧಾರ ಪೂರಕ ಅಷ್ಟಬಂಧನ ದಿವ್ಯ ಮಹಾ ಕುಂಭಾಭಿಷೇಕ ಸಂಪ್ರೋಕ್ಷಣ ಮಹೋತ್ಸವದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

▪️ದೇವರಿಗೆ ಜಾತಿ, ಧರ್ಮ ಎಂಬುದು ಇರುವುದಿಲ್ಲ. ಧರ್ಮ ಯಾವುದಾದರೂ ತತ್ವವೊಂದೇ, ದೈವ ನೂರಾದರೂ ಭಕ್ತಿಯೊಂದೆ, ಕರ್ಮ ಹಲವಾರೂ ಇದ್ದರು ನಿಷ್ಠೆಯೊಂದೇ, ದೇವನೊಬ್ಬ ನಾಮ ಹಲವು. ಕಾವೇರಿ ನದಿ ಸನಿಹದಲ್ಲಿ ರಂಗನಾಥನ ಸನ್ನಿಧಿ ಇರುವುದು ಪುಣ್ಯ. ದರ್ಗಾ ಸಹ ಇರುವುದು ಈ ನೆಲದ ಸೌಹಾರ್ಧತೆ ಎಂದರು.

▪️ಚಾಮರಾಜನಗರ ಹಿಂದುಳಿದ ಜಿಲ್ಲೆಯಲ್ಲ. ಇದು ದೇವರ ನಾಡು. ಮಲೆ ಮಹದೇಶ್ವರ, ಚಾಮರಾಜೇಶ್ವರ, ಬಿಳಿಗಿರಿರಂಗನಾಥ, ಹಿಮವದ್ ಗೋಪಾಲಸ್ವಾಮಿ, ಮಧ್ಯರಂಗ ಹೀಗೆ ಹಲವು ದೇವರು ನೆಲೆಸಿರುವ ಬೀಡು. ಕಾವೇರಿ ನದಿಯ ತಟದಲ್ಲಿ ರಂಗನಾಥಸ್ವಾಮಿ ನೆಲೆಸಿ ಹರಸುತ್ತಿದ್ದಾರೆ ಎಂದರು.

▪️ಎಎಂಆರ್ ಗ್ರೂಪಿನ ಮಹೇಶ್ ರೆಡ್ಡಿ ಅವರು ಹಾಗೂ ಕುಟುಂಬ ದೇವಾಲಯದ ಜೀರ್ಣೋದ್ಧಾರ ಮಾಡಿದ್ದಾರೆ. ಲಕ್ಷ್ಮೀ ಅಮ್ಮನವರು ರಂಗನಾಥಸ್ವಾಮಿಯ ಸೇವೆ ಮಾಡುವ ಭಾಗ್ಯ ಇವರಿಗೆ ಅವಕಾಶ ಸಿಕ್ಕಿದೆ. ಇನ್ನೂ ಹೆಚ್ಚಿನ ಶಕ್ತಿಯನ್ನು ದೇವರು ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಅರ್ಚಕಸ್ಯ ಪ್ರಭಾವೇನ ಶಿಲಾಭವತಿ ಶಂಕರಃ ಅಂದರೆ ಅರ್ಚಕರ ಪ್ರಭಾವದಿಂದ ಶಿಲೆಯ್ಲಲೂ ಶಿವನನ್ನು ಕಾಣಬಹುದು. ದೇವರು, ದೇವಸ್ಥಾನ ಎಲ್ಲರ ಆಸ್ತಿ ಎಂದು ಉಪ ಮುಖ್ಯಮಂತ್ರಿಗಳು ತಿಳಿಸಿದರು.

▪️ಆದಿರಂಗ, ಮಧ್ಯರಂಗ ಹಾಗೂ ಅಂತ್ಯರಂಗವನ್ನು ಸೂರ್ಯ ಹುಟ್ಟಿದಾಗಿನಿಂದ ಮುಳುಗುವ ತನಕ ದರ್ಶನ ಮಾಡುತ್ತಾರೆ. ದೇವಸ್ಥಾನದ ಜೀರ್ಣೋದ್ಧಾರ ಉತ್ತಮವಾಗಿ ನಡೆದಿದೆ. ಕಳೆದ ಮೂರು ನಾಲ್ಕು ದಿನಗಳಿಂದ ಅರ್ಚಕರು ಪೂಜೆ ಪುನಸ್ಕಾರ, ಹೋಮ ಹವನಗಳನ್ನು ಮಾಡಿದ್ದಾರೆ. ಈ ಬಾರಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ ಸಮಸ್ಯೆಗಳು ನಿವಾರಣೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

▪️ಇದಕ್ಕೂ ಮುನ್ನ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಪತ್ನಿ ಉಷಾ ಸೇರಿದಂತೆ ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್, ಮುಜರಾಯಿ ಹಾಗೂ ಸಾರಿಗೆ ಸಚಿವರಾದ ರಾಮಲಿಂಗರೆಡ್ಡಿ ಅವರೊಂದಿಗೆ ರಂಗನಾಥಸ್ವಾಮಿ ಹಾಗೂ ರಂಗನಾಯಕಿ (ಲಕ್ಷ್ಮೀ) ಅಮ್ಮನವರ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

▪️ಈ ಸಂದರ್ಭದಲ್ಲಿ ಶಾಸಕರಾದ ಎಂ.ಆರ್. ಮಂಜುನಾಥ್, ಸಿ. ಪುಟ್ಟರಂಗಶೆಟ್ಟಿ, ಎ.ಆರ್. ಕೃಷ್ಣಮೂರ್ತಿ, ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ಚುಡಾ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನಾ, ಮಾಜಿ ಶಾಸಕರಾದ ಆರ್. ನರೇಂದ್ರ, ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ತಹಸೀಲ್ದಾರ್ ಬಸವರಾಜು, ಎಂ.ಆರ್.ಗ್ರೂಪ್ ಕಂಪನಿ ಮಾಲೀಕರು ಹಾಗೂ ದಾನಿಗಳಾದ ಮಹೇಶ್ ರೆಡ್ಡಿ, ರಾಧಿಕಾ ರೆಡ್ಡಿ ಉಪಸ್ಥಿತರಿದ್ದರು.






ಇಂದು ಚಾಮರಾಜನಗರ ಜಿಲ್ಲಾ ಗ್ರಂಥಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.▪️ಗ್ರಂಥಾಲಯದಲ್ಲಿ ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳು, ಓದುಗ...
20/05/2026

ಇಂದು ಚಾಮರಾಜನಗರ ಜಿಲ್ಲಾ ಗ್ರಂಥಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.

▪️ಗ್ರಂಥಾಲಯದಲ್ಲಿ ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳು, ಓದುಗರಿಗೆ ನೀಡಲಾಗುತ್ತಿರುವ ಸೇವೆಗಳು, ಪುಸ್ತಕಗಳ ಸಂರಕ್ಷಣೆ ಹಾಗೂ ಡಿಜಿಟಲ್ ವ್ಯವಸ್ಥೆಗಳ ಕುರಿತು ಮಾಹಿತಿ ಪಡೆದು ಪರಿಶೀಲಿಸಲಾಯಿತು.

▪️ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳು ಹಾಗೂ ಸಾರ್ವಜನಿಕರು ಗ್ರಂಥಾಲಯದ ಸೌಲಭ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುವಂತೆ ಸಲಹೆ ನೀಡಲಾಯಿತು.

▪️ಜ್ಞಾನ ವೃದ್ಧಿಗೆ ಗ್ರಂಥಾಲಯಗಳು ಪ್ರಮುಖ ಕೇಂದ್ರಗಳಾಗಿದ್ದು, ಓದು ಸಂಸ್ಕೃತಿಯನ್ನು ಉತ್ತೇಜಿಸುವ ದಿಸೆಯಲ್ಲಿ ಇನ್ನಷ್ಟು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಶುದ್ದ ಕುಡಿಯುವ ನೀರು, ಸ್ವಚ್ಚತೆ ಮೂಲಕ ರೋಗಗಳ ನಿಯಂತ್ರಣಕ್ಕೆ ಮುಂಜಾಗ್ರತೆ ವಹಿಸಿ : ಜಿಲ್ಲಾಧಿಕಾರಿ ಶ್ರೀರೂಪ▪️ಶುದ್ದ ಕುಡಿಯುವ ನೀರು, ಸ್ವಚ್ಚ...
18/05/2026

ಶುದ್ದ ಕುಡಿಯುವ ನೀರು, ಸ್ವಚ್ಚತೆ ಮೂಲಕ ರೋಗಗಳ ನಿಯಂತ್ರಣಕ್ಕೆ ಮುಂಜಾಗ್ರತೆ ವಹಿಸಿ : ಜಿಲ್ಲಾಧಿಕಾರಿ ಶ್ರೀರೂಪ

▪️ಶುದ್ದ ಕುಡಿಯುವ ನೀರು, ಸ್ವಚ್ಚತೆ ಸೇರಿದಂತೆ ಇನ್ನಿತರ ಕ್ರಮಗಳಿಗೆ ಒತ್ತು ನೀಡುವ ಮೂಲಕ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಮುಂಜಾಗ್ರತೆ ವಹಿಸುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಸೂಚಿಸಿದರು.

▪️ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ಸರ್ವಲೆನ್ಸ್ ಮತ್ತು ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮ ಅನುಷ್ಠಾನ ಕುರಿತ ಸಾಂಕ್ರಾಮಿಕ ರೋಗಗಳ ತಡೆ ಕಾರ್ಯಕ್ರಮದ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

▪️ಕುಡಿಯುವ ನೀರಿನ ಮೂಲಗಳಿಗೆ ಕಲುಷಿತ ನೀರು ಸೇರಬಾರದು. ಪರೀಕ್ಷಿಸಿದ ನೀರಿನ ಮಾದರಿ ಕಲುಷಿತ ಎಂದು ಧೃಡಪಟ್ಟ ತಕ್ಷಣ ನೀರನ್ನು ಶುದ್ದೀಕರಿಸಲು ಕ್ರಮವಹಿಸಬೇಕು. ಕೆಟ್ಟು ಹೋಗಿರುವ ಪೈಪ್‍ಲೈನ್‍ಗಳನ್ನು ಶೀಘ್ರ ದುರಸ್ಥಿಗೊಳಿಸಬೇಕು. ಒಳಚರಂಡಿಗಳಲ್ಲಿ ಕೊಳಚೆ ನೀರು ಸರಾಗವಾಗಿ ಹರಿದು ಹೋಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

▪️ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡುವ ಸಂದರ್ಭದಲ್ಲಿ ನೀರು ಪರೀಕ್ಷೆ ಮಾಡಿ ಯೋಗ್ಯವೆಂದು ದೃಢಿಕರಿಸಿದ ನಂತರವೇ ಸರಬರಾಜು ಮಾಡಬೇಕು. ಹೋಟೆಲ್ ಗಳಲ್ಲಿ ಶುದ್ದ ಕುಡಿಯುವ ನೀರು ಪೂರೈಸಲಾಗುತ್ತಿದೆಯೇ ಎಂದು ಪರಿಶೀಲಿಸಬೇಕು. ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಪ್ಲಾಸ್ಟಿಕ್, ಉಪಯೋಗಿಸಿದ ಎಳನೀರು ಚಿಪ್ಪು, ಇನ್ನಿತರ ತ್ಯಾಜ್ಯಗಳನ್ನು ವಿಲೇವಾರಿ ಮಾಡಬೇಕು ಎಂದರು.

▪️ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣಕ್ಕಾಗಿ ಲಾರ್ವಾ ಸಮೀಕ್ಷೆ ಕೈಗೊಳ್ಳಬೇಕು. ಪ್ರಾಣಿಗಳಲ್ಲಿ ಅಸಹಜ ಸಾವು ಕಂಡು ಬಂದಲ್ಲಿ ಆರೋಗ್ಯ ಇಲಾಖೆಗೆ ವರದಿ ಮಾಡಬೇಕು. ಪಶುಪಾಲನಾ ಇಲಾಖೆಯು ಪ್ರಾಣಿಗಳಿಂದ ಮನುಷ್ಯರಿಗೆ ಹರಡಬಹುದಾದ ರೋಗಗಳ ತಡೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ರೇಬಿಸ್ ನಿಯಂತ್ರಣಕ್ಕೂ ಗಮನ ಹರಿಸಬೇಕು ಎಂದು ತಿಳಿಸಿದರು.

▪️ಅರಣ್ಯ ಇಲಾಖೆ ಪಕ್ಷಿಧಾಮಗಳಲ್ಲಿ, ಅರಣ್ಯದಲ್ಲಿ ಪ್ರಾಣಿ ಪಕ್ಷಿಗಳ ಅಸಹಜ ಮರಣ ಪ್ರಕರಣಗಳು ವರದಿಯಾದರೆ ತಕ್ಷಣವೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಪ್ರವಾಸಿಗರಿಗೆ ಪ್ರಾಣಿಜನ್ಯ ರೋಗದ ಕುರಿತು ಮುಂಜಾಗ್ರತಾ ಕ್ರಮಗಳ ಅರಿವು ಮೂಡಿಸುವ ಬಿತ್ತಿಪತ್ರಗಳನ್ನು ಪ್ರದರ್ಶಿಸಬೇಕು ಎಂದು ಹೇಳಿದರು.

▪️ಅಂಗನವಾಡಿ, ಹಾಸ್ಟೆಲ್, ಶಾಲೆಗಳಲ್ಲಿ ಪೌಷ್ಠಿಕ ಆಹಾರ, ಶುದ್ದ ಕುಡಿಯುವ ನೀರು ಇರುವಂತೆ ನೋಡಿಕೊಳ್ಳಬೇಕು. ತಿಂಡಿ-ಊಟ ತಯಾರಿಸುವವರು ಸ್ವಚ್ಚತೆಯಿಂದ ಇರುವಂತೆ ಅಧಿಕಾರಿಗಳು ಸೂಚಿಸಬೇಕು. ಶೌಚಾಲಯ ವ್ಯವಸ್ಥೆ, ಪರಿಸರ ಸ್ವಚ್ಚತೆ, ಘನತ್ಯಾಜ್ಯ ವಿಲೇವಾರಿ ಸಮರ್ಪಕವಾಗಿರಬೇಕು. ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಪರಿಸರ ಹಾಗೂ ಸಾಂಕ್ರಾಮಿಕ ರೋಗಗಳ ತಡೆಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಅಯೋಜನೆ ಮಾಡುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.

▪️ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ, ಆರೋಗ್ಯ ಇಲಾಖೆಯ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಸುಂದರೇಶ್, ಡಾ. ಚಂದ್ರಶೇಖರ್, ತಾಲೂಕು ಆರೋಗ್ಯಾಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.












Address

Chamarajanagar
571313

Alerts

Be the first to know and let us send you an email when DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ ಜಿಲ್ಲೆ posts news and promotions. Your email address will not be used for any other purpose, and you can unsubscribe at any time.

Contact The Organization

Send a message to DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ ಜಿಲ್ಲೆ:

Share