26/08/2026
ಬೆಂಗಳೂರಿನಲ್ಲಿ ಪ್ರತಿಭಟನೆಗಳನ್ನು ನಿರ್ದಿಷ್ಟ ಸ್ಥಳದಲ್ಲಿ ನಡೆಸಲು ಹೈಕೋರ್ಟ್ ಆದೇಶದ ನಂತರ ಫ್ರೀಡಂ ಪಾರ್ಕ್ ಅನ್ನು ಗುರುತಿಸಲಾಗಿತ್ತು. ವಾಹನ ಸಂಚಾರಕ್ಕೆ ಅಡ್ಡಿಯಾಗುವುದನ್ನು ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿತ್ತು. 2018ರಲ್ಲಿ, ಪ್ರತಿಭಟನಾಕಾರರಿಗೆ ಅನುಕೂಲವಾಗುವಂತೆ ಪಾರ್ಕಿಂಗ್ ಮತ್ತು ಪ್ರತಿಭಟನಾ ಸ್ಥಳವನ್ನು ನಿರ್ಮಿಸಲಾಯಿತು. ಆದರೆ, ಇತ್ತೀಚೆಗೆ ಜಿಬಿಎ (GBA) ಅಧಿಕಾರಿಗಳು ಫ್ರೀಡಂ ಪಾರ್ಕ್ ಅನ್ನು ತಮ್ಮ ವ್ಯಾಪ್ತಿಗೆ ತೆಗೆದುಕೊಂಡು, ಅಲ್ಲಿ ಪ್ರತಿಭಟನೆ ನಡೆಸಲು ದಿನಕ್ಕೆ ಒಂದು ಲಕ್ಷ ರೂಪಾಯಿ ಬಾಡಿಗೆ ಮತ್ತು ಹತ್ತು ಸಾವಿರ ರೂಪಾಯಿ ಮುಂಗಡ ಪಾವತಿಸಬೇಕು ಎಂದು ಆದೇಶ ಹೊರಡಿಸಿದ್ದಾರೆ. ಈ ಆದೇಶ ಪ್ರತಿಭಟನಾಕಾರರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಒಂದು ಲಕ್ಷ ರೂಪಾಯಿ ಪಾವತಿಸಿ ಹೋರಾಟ ನಡೆಸುವುದು ಅಸಾಧ್ಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಫ್ರೀಡಂ ಪಾರ್ಕ್ನಲ್ಲಿ ಶೌಚಾಲಯ, ಕುಡಿಯುವ ನೀರು, ವಿದ್ಯುತ್ ಅಥವಾ ದೀಪಗಳಂತಹ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ ಎಂದು ಹೋರಾಟಗಾರರು ಆರೋಪಿಸಿದ್ದಾರೆ. ಸೌಕರ್ಯವಿಲ್ಲದ ಸ್ಥಳಕ್ಕೆ ಇಷ್ಟು ದೊಡ್ಡ ಬಾಡಿಗೆ ಕೇಳುವುದು ಪ್ರತಿಭಟನೆಗಳನ್ನು ಹತ್ತಿಕ್ಕುವ ಪ್ರಯತ್ನ ಎಂದು ಅವರು ಭಾವಿಸಿದ್ದಾರೆ. ರಾಜ್ಯ ಸರ್ಕಾರ ಮತ್ತು ಜಿಬಿಎ ಈ ಆದೇಶವನ್ನು ಹಿಂತೆಗೆದುಕೊಂಡು ಪ್ರಜಾಸತ್ತಾತ್ಮಕ ಪ್ರತಿಭಟನೆಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.