31/05/2026
ಅಧಿಕೃತ ಪ್ರಕಟಣೆ / ಸಮಜಾಯಿಷಿ ಪತ್ರ.
ವಿಷಯ: ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಆದ ಫೋಟೋಗೆ ಸಂಬಂಧಿಸಿದಂತೆ ವಸ್ತುಸ್ಥಿತಿಯ ವಿವರಣೆ ಹಾಗೂ ನಮ್ಮ ನಿಲುವು.
ನಾನೊಬ್ಬ ನ್ಯಾಯವಾದಿಯಾಗಿ ಹಾಗೂ ಪ್ರಾಮಾಣಿಕ ರಾಜಕೀಯ ಪಕ್ಷದ ರಾಜ್ಯ ಪದಾಧಿಕಾರಿಯಾಗಿ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಪಕ್ಷದ ಸಂಘಟನಾ ಉಸ್ತುವಾರಿಯನ್ನು ನಿರ್ವಹಿಸುತ್ತಿದ್ದೇನೆ. ಇತ್ತೀಚೆಗೆ ನಮ್ಮ ಪಕ್ಷದ ಅಧಿಕೃತ ಪೇಜ್‌ನಲ್ಲಿ ಹೋಂ ಗಾರ್ಡ್ ಸಿಬ್ಬಂದಿಯೊಬ್ಬರ ಫೋಟೋ ಪ್ರಕಟವಾದ ವಿಚಾರ ಹಾಗೂ ಅದಕ್ಕೆ ವ್ಯಕ್ತವಾಗುತ್ತಿರುವ ಟೀಕೆಗಳ ಕುರಿತು ನೈಜ ಸಂಗತಿಗಳನ್ನು ಸಾರ್ವಜನಿಕರ ಮುಂದೆ ಇಡಲು ಬಯಸುತ್ತೇನೆ.
೧. ಹಿನ್ನೆಲೆ ಮತ್ತು ವಸ್ತುಸ್ಥಿತಿ:
ನಮ್ಮ ಪಕ್ಷದ ಪದಾಧಿಕಾರಿಗಳು ಸಾರ್ವಜನಿಕ ಸ್ಥಳವೊಂದರಲ್ಲಿ ಹೋಂ ಗಾರ್ಡ್ ಸಮವಸ್ತ್ರದಲ್ಲಿದ್ದ ವ್ಯಕ್ತಿಯೊಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಗಮನಿಸಿದ್ದಾರೆ. ವೃತ್ತಿಯ ಘನತೆಗೆ ತಕ್ಕುದಲ್ಲದ ರೀತಿಯಲ್ಲಿ ಅವರು ಮಲಗಿದ್ದನ್ನು ಕಂಡು, ಆತಂಕಗೊಂಡು ಪಕ್ಕದ ಅಂಗಡಿಯವರನ್ನು ವಿಚಾರಿಸಿದಾಗ, "ಅವರು ಬೆಳಿಗ್ಗೆ 11 ಗಂಟೆಯಿಂದಲೇ ಅತಿಯಾಗಿ ಮದ್ಯಪಾನ ಮಾಡಿ, ಪ್ರಜ್ಞೆಯಿಲ್ಲದೆ ಮತ್ತಿನಲ್ಲಿ ಮಲಗಿದ್ದಾರೆ" ಎಂಬ ಮಾಹಿತಿ ಸ್ಥಳೀಯರಿಂದ ಲಭ್ಯವಾಗಿದೆ. ತಕ್ಷಣವೇ ನಮ್ಮ ಪದಾಧಿಕಾರಿಗಳು ಅವರನ್ನು ಎಬ್ಬಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದರಾದರೂ ಆತ ಎದ್ದೇಳುವ ಸ್ಥಿತಿಯಲ್ಲಿರಲಿಲ್ಲ. ಪೊಲೀಸ್ ಇಲಾಖೆಯ ಅಡಿಯಲ್ಲಿ ಬರುವ ಸಿಬ್ಬಂದಿಯೊಬ್ಬರು ಈ ರೀತಿ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ಬಿದ್ದಿರುವುದನ್ನು ಕಂಡು, ವ್ಯವಸ್ಥೆಯನ್ನು ಎಚ್ಚರಿಸುವ ಸದುದ್ದೇಶದಿಂದ ನಮ್ಮ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು ( ಚಿತ್ರದಲ್ಲಿರುವಂತೆ).
ಈ ಪೋಸ್ಟ್ ಪ್ರಕಟವಾದ ಬಳಿಕ, ಇಂದು ರಾತ್ರಿ 8:00 ಗಂಟೆಗೆ ನಾನು ನಮ್ಮ ಪಕ್ಷದ ಪದಾಧಿಕಾರಿಗಳ ತುರ್ತು ಸಭೆ ಕರೆದು ಸಮಗ್ರ ವಿಚಾರಣೆ ನಡೆಸಿದಾಗ ಮೇಲಿನ ಎಲ್ಲಾ ಸತ್ಯಾಂಶಗಳು ಬೆಳಕಿಗೆ ಬಂದಿರುತ್ತವೆ.
೨. ಇಲಾಖೆಯ ಶಿಸ್ತು ಮತ್ತು ನೀತಿ ನಿಯಮಗಳು:
ಕೆಲಸದ ವಿಪರೀತ ಒತ್ತಡ, ದೀರ್ಘಾವಧಿಯ ಕರ್ತವ್ಯ ಅಥವಾ ಕಡ್ಡಾಯದ ಕೆಲಸದಿಂದಾಗಿ ಸಿಬ್ಬಂದಿಗಳು ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಳಲುತ್ತಿರಬಹುದು ಎಂಬುದನ್ನು ನಾವು ಸಂಪೂರ್ಣವಾಗಿ ಒಪ್ಪುತ್ತೇವೆ. ಅನಾರೋಗ್ಯದ ಕಾರಣದಿಂದ ಕೆಲವೊಮ್ಮೆ ವಿಶ್ರಾಂತಿ ಪಡೆಯುವುದು ಅನಿವಾರ್ಯವಾಗಿರಬಹುದು. ಆದರೆ, "ಯಾವ ಸ್ಥಳದಲ್ಲಿ, ಯಾವ ರೀತಿ ವಿಶ್ರಾಂತಿ ಪಡೆಯುತ್ತಿದ್ದೇವೆ" ಎಂಬ ಕನಿಷ್ಠ ಪರಿಜ್ಞಾನ ಸಮವಸ್ತ್ರ ಧರಿಸಿದ ಸಾರ್ವಜನಿಕ ಸೇವಕರಿಗೆ ಇರಬೇಕಾಗುತ್ತದೆ. ಸಮವಸ್ತ್ರದಲ್ಲಿದ್ದಾಗ ಪಾಲಿಸಬೇಕಾದ ನೀತಿ-ನಿಯಮಗಳನ್ನು ಗಾಳಿಗೆ ತೂರಿ, ಸಾರ್ವಜನಿಕವಾಗಿ ಇಲಾಖೆಯ ಘನತೆಗೆ ಧಕ್ಕೆ ತರುವಂತೆ ವರ್ತಿಸುವುದು ಯಾವುದೇ ರೀತಿಯಲ್ಲೂ ಸಮರ್ಥನೀಯವಲ್ಲ.
ನಿವೃತ್ತ ಪೊಲೀಸ್ ಅಧಿಕಾರಿ Jbrswamy Rangaswamy ಅಧಿಕಾರಿಗೆ ಒಬ್ಬ ಪ್ರಜ್ಞಾವಂತ ನ್ಯಾಯವಾದಿಯಾಗಿ ಕೆಲವೊಂದು ಪ್ರಶ್ನೆ ಮತ್ತು ಸಮಾಜಹಿಷಿ ಕೊಡಬೇಕಾಗಿದೆ.
ಸ್ವಾಮೀ ನಿವೃತ್ತ ಅಧಿಕಾರಿಗಳೇ,
ನಮ್ಮ ಪದಾಧಿಕಾರಿ ಒಬ್ಬರು ಹಾಕಿದ ಪೋಸ್ಟ್‌ನ ಆಶಯವನ್ನು ಅರ್ಥಮಾಡಿಕೊಳ್ಳದೆ ನೀವು ಕೇವಲ ಇಲಾಖೆಯ ಸಮರ್ಥನೆಗೆ ಇಳಿದಿದ್ದೀರಿ. ಕೆಆರ್‌ಎಸ್ ಪಕ್ಷವು ಪ್ರಾಮಾಣಿಕ ಪೊಲೀಸರನ್ನು, ಅದರಲ್ಲೂ ವಿಶೇಷವಾಗಿ ನಮ್ಮ ಪಕ್ಷ ಹಗಲು-ರಾತ್ರಿ ಕಷ್ಟಪಡುವ ಪೊಲೀಸ್ ಪೇದೆಗಳನ್ನು ಸದಾ ಅತ್ಯಂತ ಗೌರವದಿಂದ ಕಾಣುತ್ತದೆ. ನಮಗೆ ವ್ಯವಸ್ಥೆಯ ಮೇಲಿರುವ ಕಾಳಜಿಯನ್ನು ನೀವು 'ಕಿಡಿಗೇಡಿತನ' ಎಂದು ಕರೆದಿದ್ದಕ್ಕೆ ನಮ್ಮದೂ ಕೆಲವು ನೇರವಾದ ಪ್ರಶ್ನೆಗಳಿವೆ:
ಮಧುಕರ್ ಶೆಟ್ಟಿ ಅವರ ಆದರ್ಶ ನೆನಪಿದೆಯೇ?: ಇವತ್ತು ನಿಮ್ಮ ಇಲಾಖೆ ದಿ|| ಮಧುಕರ್ ಶೆಟ್ಟಿ ಅವರಂತಹ ಪ್ರಾಮಾಣಿಕ ಅಧಿಕಾರಿಯನ್ನು ಎಷ್ಟು ನೆನಪಿಸಿಕೊಳ್ಳುತ್ತಿದೆಯೋ ಗೊತ್ತಿಲ್ಲ. ಆದರೆ ಕೆಆರ್‌ಎಸ್ ಪಕ್ಷವು ಪ್ರತಿ ವರ್ಷ ಅವರ ಹುಟ್ಟಿದ ದಿನ ಮತ್ತು ಪುಣ್ಯಸ್ಮರಣೆಯನ್ನು ಅತ್ಯಂತ ಗೌರವದಿಂದ ಆಚರಿಸುತ್ತದೆ. ಅಷ್ಟೇ ಅಲ್ಲ, ಪೊಲೀಸ್ ಠಾಣೆಗಳಿಗೆ ಅವರ ಫೋಟೋವನ್ನು ನೀಡಿ, "ಇವರ ರೀತಿ ಆದರ್ಶ ಬೆಳೆಸಿಕೊಳ್ಳಿ" ಎಂದು ಸಿಬ್ಬಂದಿಗೆ ನೆನಪಿಸುವ ಕೆಲಸ ಮಾಡುತ್ತಿರುವುದು ಇದೇ ಕೆಆರ್‌ಎಸ್ ಪಕ್ಷ.
ಪ್ರಾಮಾಣಿಕ ಪೊಲೀಸರು ನಮ್ಮೊಂದಿಗಿದ್ದಾರೆ: ರಾಜ್ಯದಲ್ಲಿ ಎಲೆಮರೆ ಕಾಯಿಯಂತೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅನೇಕ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕೆಆರ್‌ಎಸ್ ಪಕ್ಷ ಯಾವತ್ತೂ ಕೆಟ್ಟದಾಗಿ ಕಂಡಿಲ್ಲ. ವಾಸ್ತವವಾಗಿ, ನಮ್ಮ ಹೋರಾಟವನ್ನು ಶ್ಲಾಘಿಸಿ ಅನೇಕ ಪೊಲೀಸರು ಮತ್ತು ಅಧಿಕಾರಿಗಳು ಪಕ್ಷಕ್ಕೆ ಗುಪ್ತವಾಗಿ ದೇಣಿಗೆಯನ್ನು ನೀಡುತ್ತಿದ್ದಾರೆ ಹಾಗೂ ಬೆಂಬಲಿಸುತ್ತಿದ್ದಾರೆ.ಭ್ರಷ್ಟ ವ್ಯವಸ್ಥೆಯ ಬಗ್ಗೆ ಮಾಹಿತಿಯನ್ನು ಕೊಡುತ್ತಿದ್ದಾರೆ
ಜೀತದಾಳು ಪದ್ಧತಿ ಮತ್ತು ನಿಮ್ಮ ಮೌನ:
ಪೊಲೀಸರಿಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳ ಬಗ್ಗೆ, ಸರ್ಕಾರ ಏನು ಮಾಡಬೇಕಾಗಿದೆ ಎಂಬುದರ ಬಗ್ಗೆ ಇಲಾಖೆಯಲ್ಲಿದ್ದಾಗ ನೀವೇಕೆ ಧ್ವನಿ ಎತ್ತಲಿಲ್ಲ? ಡ್ಯೂಟಿಯಲ್ಲಿದ್ದಾಗ ಬಾಯಿಗೆ ಬೀಗ ಹಾಕಿಕೊಳ್ಳುವ ನೀವು, ನಿವೃತ್ತಿಯ ನಂತರ ಫೇಸ್‌ಬುಕ್‌ನಲ್ಲಿ ಜ್ಞಾನ ಹಂಚಲು ಬರುತ್ತೀರಿ! ಅನೇಕ ಭ್ರಷ್ಟ ಹಿರಿಯ ಅಧಿಕಾರಿಗಳು ಕೆಳಹಂತದ ಪೊಲೀಸರನ್ನು ಇಂದಿಗೂ ತಮ್ಮ ಮನೆಯ ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿಲ್ಲವೇ? (ಪ್ರಾಮಾಣಿಕ ಅಧಿಕಾರಿಗಳನ್ನು ಹೊರೆತು ಪಡಿಸಿ )ಆಗ ಎಲ್ಲಿ ಹೋಗಿರುತ್ತದೆ ನಿಮ್ಮ ಈ ಇಲಾಖೆಯ ಶಿಸ್ತು ಮತ್ತು ಮರ್ಯಾದೆ? ನಿಮ್ಮ ಅವಾವೇಶ?
ಧ್ವನಿ ಎತ್ತಿದವರ ದಮನ: ಪೊಲೀಸರ ಹಕ್ಕುಗಳಿಗಾಗಿ, ಅವರ ಸೌಕರ್ಯಗಳಿಗಾಗಿ ಧ್ವನಿ ಎತ್ತಿದ ಶಶಿಧರ್ ಅವರಿಗೆ ಏನಾಯಿತು ಎಂಬುದು ಇಡೀ ರಾಜ್ಯಕ್ಕೆ ಗೊತ್ತು.
2016 ರಲ್ಲಿ ಕರ್ನಾಟಕ ಪೊಲೀಸ್ ಸಿಬ್ಬಂದಿಯ ವಿವಿಧ ಸಮಸ್ಯೆಗಳನ್ನು (ಕಡಿಮೆ ವೇತನ, ನಿರಂತರ ಕೆಲಸದ ಒತ್ತಡ, ರಜೆಗಳ ಕೊರತೆ, ಮತ್ತು ಹಿರಿಯ ಅಧಿಕಾರಿಗಳಿಂದ ಕಿರುಕುಳ) ವಿರೋಧಿಸಿ ಜೂನ್ 4, 2016 ರಂದು ರಾಜ್ಯಾದ್ಯಂತ ಬೃಹತ್ ರಜೆ ಹಾಕಿ ಪ್ರತಿಭಟಿಸುವಂತೆ ಶಶಿಧರ್ ಕರೆ ನೀಡಿದ್ದರು.ಪ್ರತಿಭಟನೆಯ ಕರೆ ನೀಡಿದ ಬೆನ್ನಲ್ಲೇ, ಸರ್ಕಾರ ಮತ್ತು ಪೊಲೀಸ್ ಇಲಾಖೆ ಇದನ್ನು ಶಿಸ್ತು ಉಲ್ಲಂಘನೆ ಮತ್ತು ದಂಗೆಗೆ ಪ್ರಚೋದನೆ ಎಂದು ಪರಿಗಣಿಸಿತು. ಜೂನ್ 2, 2016 ರ ಮಧ್ಯರಾತ್ರಿ ಬೆಂಗಳೂರಿನ ಯಲಹಂಕ ನಿವಾಸದಲ್ಲಿ ಶಶಿಧರ್ ಅವರನ್ನು ಬಂಧಿಸಲಾಯಿತು. ಅವರ ಮೇಲೆ ಪ್ರಮುಖವಾಗಿ ಕೆಳಗಿನ ಕಾಯ್ದೆಗಳಡಿ ಮೊಕದ್ದಮೆ ಹೂಡಲಾಗಿತ್ತು:
ದೇಶದ್ರೋಹ (Sedition): ಆಗಿನ ಐಪಿಸಿ ಸೆಕ್ಷನ್ 124A (ಸರ್ಕಾರದ ವಿರುದ್ಧ ಅಸಮಾಧಾನ ಮೂಡಿಸಲು ಯತ್ನ).
ಪೊಲೀಸ್ (ಪಡೆಗಳ ದಂಗೆಗೆ ಪ್ರಚೋದನೆ) ಕಾಯ್ದೆ, 1922: ಪೊಲೀಸ್ ಸಿಬ್ಬಂದಿ ಕರ್ತವ್ಯಕ್ಕೆ ಗೈರಾಗುವಂತೆ ಅಥವಾ ಶಿಸ್ತು ಉಲ್ಲಂಘಿಸುವಂತೆ ಪ್ರಚೋದಿಸುವುದು.
ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ (ESMA).
ಗಮನಿಸಿ ಈ ಬಂಧನದ ನಂತರ ಶಶಿಧರ್ ಅವರು ಸುಮಾರು 80 ಕ್ಕೂ ಹೆಚ್ಚು ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು.
ಶಶಿಧರ್ ಅವರು ಪೊಲೀಸ್ ಸಿಬ್ಬಂದಿಯ ಹಕ್ಕುಗಳಿಗಾಗಿ ಮತ್ತು ಅವರ ಕಲ್ಯಾಣಕ್ಕಾಗಿ ಧ್ವನಿ ಎತ್ತಿದ್ದಾರೆಯೇ ಹೊರತು, ಸರ್ಕಾರದ ವಿರುದ್ಧ ದಂಗೆ ಎದ್ದಿಲ್ಲ ಅಥವಾ ದೇಶದ್ರೋಹದ ಕೆಲಸ ಮಾಡಿಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಅವರ ಮೇಲಿದ್ದ ಐಪಿಸಿ ಸೆಕ್ಷನ್ 124A (ದೇಶದ್ರೋಹ) ಆರೋಪವನ್ನು ರದ್ದುಗೊಳಿಸಿತು.
'ಎಸ್ಮಾ' (Essential Services Maintenance Act) ಕಾಯ್ದೆ ತಂದು ಅವರ ಧ್ವನಿಯನ್ನು ದಮನ ಮಾಡಲಾಯಿತು. ಅಂದು ಇಲಾಖೆಯ ಸಿಬ್ಬಂದಿಯ ಪರವಾಗಿ ನಿಲ್ಲದ ವ್ಯವಸ್ಥೆ, ಇಂದು ರಸ್ತೆಯಲ್ಲಿ ಪ್ರಜ್ಞೆಯಿಲ್ಲದೆ ಬಿದ್ದಿರುವ ಹೋಂ ಗಾರ್ಡ್ ಸಿಬ್ಬಂದಿಯನ್ನು 'ಆಯಾಸದ ನಿದ್ದೆ' ಎಂದು ಕರೆಯುತ್ತಿರುವುದು ಹಾಸ್ಯಾಸ್ಪದ.
ಕೆಆರ್‌ಎಸ್ ಪಕ್ಷವು ಇವತ್ತಿಗೂ, ಮುಂದೆಯೂ ಪ್ರಾಮಾಣಿಕ ಪೊಲೀಸರ ಪರವಾಗಿ ಬಹಿರಂಗವಾಗಿ ನಿಲ್ಲುತ್ತದೆ. ಪೊಲೀಸರಿಗೆ ಸಿಗಬೇಕಾದ ನ್ಯಾಯಯುತ ಸೌಕರ್ಯಗಳು, ರಜೆಗಳು ಮತ್ತು ಮಾನವೀಯ ಹಕ್ಕುಗಳಿಗಾಗಿ ಹೋರಾಡಲು ನಾವು ಸದಾ ಸಿದ್ಧರಿದ್ದೇವೆ.
ನಿಮಗೆ ನಿಜವಾಗಿಯೂ ತಾಕತ್ತು, ದಮ್ಮು ಮತ್ತು ಕಳಕಳಿ ಇದ್ದರೆ ಬನ್ನಿ; ಪೊಲೀಸರ ಹಕ್ಕುಗಳಿಗಾಗಿ ಮತ್ತು ಅವರಿಗೆ ಸಿಗಬೇಕಾದ ಸೌಕರ್ಯಗಳಿಗಾಗಿ ನಮ್ಮೊಂದಿಗೆ ಕೈಜೋಡಿಸಿ ಹೋರಾಟ ಮಾಡಿ. ಅದನ್ನು ಬಿಟ್ಟು, ಕರ್ತವ್ಯದ ಅವಧಿಯಲ್ಲಿ ರಸ್ತೆಬದಿಯಲ್ಲಿ ಬಿದ್ದಿರುವ ಹೋಂ ಗಾರ್ಡ್ ಬೇಜವಾಬ್ದಾರಿತನಕ್ಕೆ 'ಅದ್ಭುತ ದೇಶಸೇವೆ'ಯ ಮುಖವಾಡ ತೊಡಿಸಲು ಬರಬೇಡಿ.
ಆ ರೀತಿ ಇದ್ದರೆ ನಿಮ್ಮ ಒಡೆತನದ ಮನೆಯಲ್ಲಿ ಬ್ಯೂಟಿ ಪಾರ್ಲರ್ ನಲ್ಲಿ ವೇಶ್ಯವಾಟಿಕೆ ನಡೆಯುತ್ತಿದೆ. ಎಂದು ರೈಡ್ ಆಗಿ FIR ಆದಾಗ ನಿಮ್ಮ ಮೇಲಿನ ಆರೋಪ ಇದ್ದಾಗ,
ಒಡನಾಡಿ ಸಂಸ್ಥೆಯು ಮಾನವ ಕಳ್ಳಸಾಗಣೆ ಮತ್ತು ವೇಶ್ಯಾವಾಟಿಕೆ ಜಾಲಗಳ ವಿರುದ್ಧ ದಶಕಗಳಿಂದ ಹೋರಾಡುತ್ತಾ ಮೈಸೂರಿನಲ್ಲಿ ಇಂತಹ ದಂಧೆಗಳ ವಿರುದ್ಧ ನಿರಂತರವಾಗಿ ಕಾರ್ಯಾಚರಣೆ ನಡೆಸುವ 'ಒಡನಾಡಿ' ಸಂಸ್ಥೆಯ ಮುಖ್ಯಸ್ಥರಾದ ಸ್ಟ್ಯಾನ್ಲಿ ಮತ್ತು ಪರಶುರಾಮ್ ಅವರು ಈ ಪ್ರಕರಣದಲ್ಲಿ ನಿಮ್ಮ ಪಾತ್ರದ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದರು ಸಾರ್ವಜನಿಕರು ಮತ್ತು ನೆನಪಿಸಿಕೊಳ್ಳಿ. KRS ಪಕ್ಷ ಅಂದು ಪ್ರಬುದ್ಧ ವಾಗಿ ನಡೆದುಕೊಂಡಿತ್ತು. ನಾವು ಅಪ್ರಬುದ್ಧರಂತೆ ನಡೆದುಕೊಳ್ಳಲಿಲ್ಲ. ನೀವು ಹೇಳಿದ್ದಾಗೆ ಕಿಡಿಗೇಡಿತನ ಪ್ರದರ್ಶನ ಮಾಡಬೇಕಿತ್ತೆ?
ನಾವು ಈ ಭ್ರಷ್ಟ ವ್ಯವಸ್ಥೆ ವಿರುದ್ಧ ನಿಂತಿರುವಾಗ ಯಾವುದೇ ಸಾರ್ವಜನಿಕರ ತೆರಿಗೆ ಹಣದಿಂದ ಸಂಬಳ ಪಡೆದುಕೊಳ್ಳುತ್ತಿಲ್ಲ. ನಾವೆಲ್ಲ ಪುಡಾರಿ ಪೋಕರಿಗಳು ಏನು ಅಲ್ಲ. ನಮ್ಮಲ್ಲಿಯೂ ಕೂಡ ವಕೀಲರಿದ್ದಾರೆ ಇಂಜಿನಿಯರ್ಸ್ ಗಳಿದ್ದರೆ ಸಾಕಷ್ಟು ಉನ್ನತ ವ್ಯಾಸಂಗ ಮಾಡಿರುವ ಪದವಿದರು ಇದ್ದಾರೆ. ವಿನಯ ವಿವೇಕ ಇರುವ ಪ್ರಜ್ಞಾವಂತ ಪ್ರಾಮಾಣಿಕ ವ್ಯಕ್ತಿಗಳಿದ್ದಾರೆ. ಎಂಬುದು ನೆನಪಿರಲಿ.
ನಿಮಗೆ ಈ ವ್ಯವಸ್ಥೆ ವಿರುದ್ಧ ಹೋರಾಟ ಮಾಡುವ ಧೈರ್ಯವಿದ್ದರೆ, ಪ್ರಾಮಾಣಿಕ ಪೊಲೀಸರಿಗೆ ಆಗುತ್ತಿರುವ ಸಮಸ್ಯೆಗಳ ವಿರುದ್ಧ ಹೋರಾಟ ಮಾಡಲು ಬಹಿರಂಗ ಆಹ್ವಾನವನ್ನು ನೀಡುತ್ತಿದ್ದೇವೆ ಚರ್ಚೆಗೆ ಬನ್ನಿ.
ಅನಗತ್ಯವಾದ ಚರ್ಚೆ ಮತ್ತು ವಾದವನ್ನು ನಮಗೆ ನಡೆಸಲು ಇಷ್ಟವಿಲ್ಲ. ನಾನು ಕೂಡ ನ್ಯಾಯಾಲಯದ ಒಳಗೆ ಮತ್ತು ಹೊರಗೆ ಭ್ರಷ್ಟ ವ್ಯವಸ್ಥೆಯ ವಿರುದ್ಧ ನಾಲ್ಕೈದು ಗಂಟೆಗಳ ಕಾಲ ಸತತವಾಗಿ ವಾದ ಪ್ರತಿವಾದ ಮಾಡಿರುವವನೇ ಆಗಿದ್ದೇನೆ.
ಪೊಲೀಸ್ ಇಲಾಖೆಯ ಸ್ನೇಹಿತರ ಟೀಕೆಗಳಿಗೆ ಉತ್ತರವಿದು:
ಈ ಘಟನೆಯನ್ನು ಮುಂದಿಟ್ಟುಕೊಂಡು, ಪೊಲೀಸ್ ಇಲಾಖೆಯ ಕೆಲವು ಸಿಬ್ಬಂದಿಗಳು ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ನಮ್ಮ ನಡೆಯನ್ನು ಟೀಕಿಸಿ, ಪೊಲೀಸ್ ವ್ಯವಸ್ಥೆಯನ್ನು ನಮ್ಮ ವಿರುದ್ಧ ಎತ್ತಿಕಟ್ಟುವ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಅವರಿಗೆ ನಾನು ಅತ್ಯಂತ ವಿನಮ್ರವಾಗಿ ತಿಳಿಸಬಯಸುವುದೇನೆಂದರೆ:
ವ್ಯವಸ್ಥೆಯ ದುರಾಡಳಿತದ ವಿರುದ್ಧ ನಮ್ಮ ಹೋರಾಟ: ಸರ್ಕಾರದ ದುರಾಡಳಿತ ಮತ್ತು ಆಡಳಿತ ವ್ಯವಸ್ಥೆಯ ವೈಖರಿಯ ಬಗ್ಗೆ ನಮಗೂ ತೀವ್ರ ಅಸಹ್ಯವಿದೆ. ಅನೇಕ ಮೂಲಭೂತ ಸವಲತ್ತುಗಳು, ಸೂಕ್ತ ವೇತನ ಹಾಗೂ ಸೌಲಭ್ಯಗಳಿಂದ ವಂಚಿತರಾಗಿರುವ ಹೋಮ್ ಗಾರ್ಡ್‌ಗಳು ಮತ್ತು ಕೆಳಹಂತದ ಪೊಲೀಸ್ ಅಧಿಕಾರಿಗಳ ಪರವಾಗಿ ನಮ್ಮ ಪಕ್ಷ ಸದಾ ಧ್ವನಿ ಎತ್ತುತ್ತಾ ಬಂದಿದೆ. ಅವರ ಶೋಷಣೆಗೆ ಕಾರಣವಾಗಿರುವ ವ್ಯವಸ್ಥೆಯ ವಿರುದ್ಧವೇ ನಮ್ಮ ಹೋರಾಟವೇ ಹೊರತು ವೈಯಕ್ತಿಕವಾಗಿ ಕೆಳಹಂತದ ಸಿಬ್ಬಂದಿಗಳ ಮೇಲಲ್ಲ.
ನಮ್ಮ ವಿಷಾದ ಮತ್ತು ಸ್ಪಷ್ಟನೆ: ಈ ಫೋಟೋವನ್ನು ನಮ್ಮ ಪೇಜ್‌ನಲ್ಲಿ ಅಪ್‌ಲೋಡ್ ಮಾಡುವಾಗ ಬಳಸಲಾದ ಕೆಲವು ಕಟು ಪದಗಳು ಹಾಗೂ ವ್ಯವಸ್ಥೆಯ ಅಶಿಸ್ತಿನ ವಿಚಾರವಾಗಿ ಬರೆದಿರುವ ಶೈಲಿಯ ಬಗ್ಗೆ ನಮಗೆ ವಿಷಾದವಿದೆ. ಕಷ್ಟಪಟ್ಟು ಪ್ರಾಮಾಣಿಕವಾಗಿ ದುಡಿಯುವ ಇಲಾಖೆಯ ಇತರ ಸಿಬ್ಬಂದಿಗಳ ಮನಸ್ಸಿಗೆ ಇದರಿಂದ ನೋವಾಗಿದ್ದರೆ ಅದಕ್ಕೆ ನಾವು ಖೇದ ವ್ಯಕ್ತಪಡಿಸುತ್ತೇವೆ. ಆ ಪೋಸ್ಟರ್ ನ್ನು ನಾನು ಈ ಸಮಯದಲ್ಲಿ ಡಿಲಿಟ್ ಮಾಡಿದ್ದೇನೆ.
ನಾವು ವ್ಯವಸ್ಥೆಯನ್ನು ಸುಧಾರಿಸುವ ಪ್ರಾಮಾಣಿಕ ಆಶಯ ಹೊಂದಿರುವವರೇ ಹೊರತು, ಪೊಲೀಸರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಉದ್ದೇಶ ನಮಗಿಲ್ಲ. ಆದರೆ, ಇಲಾಖೆಯ ಸಿಬ್ಬಂದಿಗಳ ಸಂಕಷ್ಟ ಮತ್ತು ನೋವಿಗೆ ಕಾರಣವಾಗಿರುವ ಮೇಲಧಿಕಾರಿಗಳು ಹಾಗೂ ರಾಜಕಾರಣಿಗಳ ವಿರುದ್ಧ ಧ್ವನಿ ಎತ್ತಬೇಕಾದವರೇ, ಇಂದು ನಮ್ಮ ಪ್ರಾಮಾಣಿಕ ಕೆಲಸವನ್ನು ತಪ್ಪು ಆಯಾಮದಲ್ಲಿ ಬಿಂಬಿಸುತ್ತಿರುವುದು ದುರದೃಷ್ಟಕರ.
ಸಮವಸ್ತ್ರದ ಗೌರವ ಮತ್ತು ಸಾರ್ವಜನಿಕ ಶಿಸ್ತು ಕಾಪಾಡುವುದು ಎಲ್ಲರ ಕರ್ತವ್ಯ. ಇನ್ಮುಂದೆ ಇಂತಹ ಸೂಕ್ಷ್ಮ ವಿಚಾರಗಳನ್ನು ಸಾರ್ವಜನಿಕವಾಗಿ ಚರ್ಚಿಸುವಾಗ ಇನ್ನಷ್ಟು ಜವಾಬ್ದಾರಿಯಿಂದ ನಡೆದುಕೊಳ್ಳಲಿದ್ದೇವೆ ಎಂದು ಈ ಮೂಲಕ ಸ್ಪಷ್ಟಪಡಿಸುತ್ತೇನೆ.
ಇಂತಿ,
ರವಿಕುಮಾರ್ ಎಂ MSW, PGD-HRM, LL.B.
ನ್ಯಾಯವಾದಿ
,ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಜಿಲ್ಲಾ ಸಂಘಟನಾ ಉಸ್ತುವಾರಿ (ಮೈಸೂರು-ಚಾಮರಾಜನಗರ)
Mysuru City Police ನನ್ನೂರು ಮೈಸೂರು Nannuru Mysuru