30/06/2025
*ತೆರಿಗೆ ಪಾವತಿಗೆ ಹಾಡಿನ ಮೂಲಕ ಮನವಿ ಮಾಡಿದ ಗ್ರಾಪಂ ಸಿಬ್ಬಂದಿ ರೇವಣಸಿದ್ದ ಆಚಾರಿ*
ವಿಜಯನಗರ: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನೆಲ್ಲಡೆ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಕಳೆದ ಒಂದು ವಾರದಿಂದ ತೆರಿಗೆ ವಸೂಲಾತಿ ವಿಶೇಷ ಅಭಿಯಾನ ನಡೆದಿದ್ದು, ಈ ಅಭಿಯಾನದ ಪ್ರಯುಕ್ತ ವಿವಿಧ ರೀತಿಯಲ್ಲಿ ಜಾಗೃತಿ ಮೂಡಿಸಿ ತೆರಿಗೆ ವಸೂಲಾತಿ ಮಾಡಲಾಗುತ್ತಿದೆ. ಡಂಗೂರ ಸಾರುವುದು, ಕಸ ಸಂಗ್ರಹಿಸುವ ವಾಹನದ ಮೂಲಕ ಪ್ರಚಾರ ಮಾಡುವುದು, ಪೋಸ್ಟರ್ ಮೂಲಕ ಜಾಗೃತಿ ಮೂಡಿಸಿ ಮನೆಮನೆಗೆ ಇಡೀ ಗ್ರಾಪಂ ಸಿಬ್ಬಂದಿಯೇ ತೆರಳಿ ತೆರಿಗೆ ವಸೂಲಾತಿ ಪ್ರಕ್ರಿಯೆಯಲ್ಲಿ ತೊಡಗುತ್ತಿದೆ. ಆದರೆ, ಒಂದು ಹೆಜ್ಜೆ ಮುಂದೆ ಹೋಗಿರುವ ಹರಪನಹಳ್ಳಿ ತಾಲೂಕಿನ ಅಣಜಿಗೆರೆ, ಹೊಸಕೋಟೆ ಗ್ರಾಪಂನ ಎಸ್ ಡಿ ಎ ಎ ಆದ ರೇವಣಸಿದ್ದ ಆಚಾರಿ ಎನ್ನುವವರು ಸ್ವತಃ ಹಾಡು ರಚಿಸಿ, ತಾವೇ ಸಂಗೀತ ನುಡಿಸುತ್ತ ತೆರಿಗೆ ಪಾವತಿಸಲು ಹಾಡಿನ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಕಳೆದ 2024-25ನೇ ಸಾಲಿನಲ್ಲಿ ಹರಪನಹಳ್ಳಿ ತಾಲೂಕು ತೆರಿಗೆ ವಸೂಲಾತಿಯಲ್ಲಿ ಕಲ್ಯಾಣ ಕರ್ನಾಟಕದಲ್ಲೇ ಮೊದಲ ಸ್ಥಾನದಲ್ಲಿತ್ತು.
ತೆರಿಗೆ ವಸೂಲಾತಿ ಅಭಿಯಾನದ ಪ್ರಯುಕ್ತ ರೇವಣಸಿದ್ದ ಆಚಾರಿ ಅವರ ಹಾಡಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಜಿಲ್ಲಾ ಪಂಚಾಯಿತಿಯ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಹರಪನಹಳ್ಳಿ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ರೇವಣಸಿದ್ದ ಆಚಾರಿಯ ವಿಭಿನ್ನ ಪ್ರಯತ್ನಕ್ಕೆ ಅಭಿನಂದನೆಗಳು ತಿಳಿಸಿದ್ದಾರೆ.