20/04/2026
ಶಕುನವೆಂದೆಂಬೆ, ಅವಶಕುನವೆಂದೆಂಬೆ.
ನಿಮ್ಮವರು ಅಳಲಿಕೆ ಅಂದೇಕೆ ಬಂದೆ?
ನಿಮ್ಮವರು ಅಳಲಿಕೆ ಇಂದೇಕೆ ಹೋದೆ?
ನೀ ಹೋಹಾಗಳಕ್ಕೆ! ಬಾಹಾಗಳಕ್ಕೆ!
ಅಕ್ಕೆ ಬಾರದ ಮುನ್ನ ಪೂಜಿಸು ಕೂಡಲಸಂಗಮದೇವನ.
ಸಾಮಾಜಿಕ ಅಸಮಾನತೆಯನ್ನು ತೊಲಗಿಸಲು, ಧರ್ಮ ಕರ್ಮಗಳ ಮರ್ಮವನ್ನು ತಿಳಿಸಲು, ಜಾತಿ ತಾರತಮ್ಯಕ್ಕೆ ಪ್ರತಿರೋಧ ಒಡ್ಡಲು, ಶ್ರೇಣೀಕರಣ ವ್ಯವಸ್ಥೆಯಡಿ ನಡೆಯುವ ಶೋಷಣೆ ಹಾಗೂ ವಂಚನೆಯ ವಿರುದ್ಧ ಸಿಡಿದೇಳುವ ದನಿಯಾಗಲು ಜಗತ್ತಿಗೆ ದೊರೆತ ಪ್ರಖರ ಧ್ವನಿ ಎಂದರೆ ಕ್ರಾಂತಿಯೋಗಿ ಜಗದ್ಗುರು ಬಸವಣ್ಣ.
ಬಸವಣ್ಣನವರು ಜಾತಿ ತಾರತಮ್ಯ, ಮೇಲು-ಕೀಳು, ಅಸ್ಪೃಶ್ಯತೆಯಂತಹ ಕ್ರೂರ ಆಚರಣೆಗಳಿಂದ ನಲುಗಿದ್ದ ಸಮಾಜದಲ್ಲಿ ಹೊಸ ಕ್ರಾಂತಿಯನ್ನು ಹುಟ್ಟುಹಾಕಿದ ಶರಣರಲ್ಲಿ ಅಗ್ರಗಣ್ಯರು. ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಅರಿವಿನ ಬೆಳಕು ಮೂಡಿಸಿದವರು. ಸಮಾನತೆಯ ಬೀಜ ಬಿತ್ತಿದ, ಶೋಷಣೆ-ಮೂಢನಂಬಿಕೆಗಳ ವಿರುದ್ಧ ಹೋರಾಡಿದ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಜಗಜ್ಯೋತಿ ಬಸವಣ್ಣನವರು ತೋರಿಸಿದ ಹಾದಿಯಲ್ಲಿ ನಾವೆಲ್ಲಾ ಮುನ್ನಡೆಯೋಣ.
ಸರ್ವರಿಗೂ ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು.